image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆಯುಡಬ್ಲ್ಯುಜೆ 2025ರ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕೆಯುಡಬ್ಲ್ಯುಜೆ 2025ರ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗಾಗಿ ಅರ್ಹ ಪತ್ರಕರ್ತರಿಂದ ವರದಿ, ಲೇಖನ ಹಾಗೂ ಸುದ್ದಿಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾದ ಹಾಗೂ ವಿದ್ಯುನ್ಮಾನ (ಟಿವಿ) ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳನ್ನು ಪರಿಗಣಿಸಲಾಗುವುದು. ಗ್ರಾಮಾಂತರ, ಮಾನವೀಯ, ಅಪರಾಧ, ಕ್ರೀಡೆ, ರಾಜಕೀಯ ವಿಶ್ಲೇಷಣೆ, ಕೃಷಿ, ಅರಣ್ಯ ಮತ್ತು ವನ್ಯಪ್ರಾಣಿ, ನ್ಯಾಯಾಲಯ, ತನಿಖಾ ವರದಿ, ಚಲನಚಿತ್ರ ವಿಮರ್ಶೆ, ಪುಟ ವಿನ್ಯಾಸ ಹಾಗೂ ಟಿವಿ ವಿಭಾಗದ ಅತ್ಯುತ್ತಮ ಆ್ಯಂಕರ್ ಸೇರಿದಂತೆ ಒಟ್ಟು 25 ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬಯಸುವವರು ಸಂಘದ ಸದಸ್ಯತ್ವದ ಗುರುತಿನ ಚೀಟಿ, ಆಧಾರ್ ಕಾರ್ಡ್ ಪ್ರತಿ, ಸ್ವ-ಪರಿಚಯ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಬೇಕು. ಮುದ್ರಣ ಮಾಧ್ಯಮದ ವರದಿಗಳ ಮೂರು ಪ್ರತಿಗಳನ್ನು (ಜೆರಾಕ್ಸ್ ಆದರೆ ದೃಢೀಕೃತ ಪ್ರತಿ) ಹಾಗೂ ಟಿವಿ ವಿಭಾಗದವರು ಪ್ರಸಾರವಾದ ಕ್ಲಿಪಿಂಗ್ (ಸಿಡಿ ಅಥವಾ ಪೆನ್‌ಡ್ರೈವ್) ಮತ್ತು ಸಂಪಾದಕರಿಂದ ದೃಢೀಕರಿಸಿದ ಸ್ಕ್ರಿಪ್ಟ್ ಕಳುಹಿಸಬೇಕು. ಒಬ್ಬರು ಗರಿಷ್ಠ ಮೂರು ಪ್ರಶಸ್ತಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅನುವಾದಿತ ಲೇಖನಗಳು, ಪದಾಧಿಕಾರಿಗಳು, ಈಗಾಗಲೇ ಎರಡು ಬಾರಿ ಪ್ರಶಸ್ತಿ ಪಡೆದವರು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಆಸಕ್ತ ಪತ್ರಕರ್ತರು ತಮ್ಮ ಅರ್ಜಿಗಳನ್ನು 2026ರ ನವೆಂಬರ್ 30ರೊಳಗೆ "ಅಧ್ಯಕ್ಷರು / ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ), ಕಂದಾಯ ಭವನ, 3ನೇ ಮಹಡಿ, ಕೆ.ಜಿ. ರಸ್ತೆ, ಬೆಂಗಳೂರು - 560009" ಈ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು.

 

Category
ಕರಾವಳಿ ತರಂಗಿಣಿ