ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದೇ ನವೆಂಬರ್ 27ರಂದು ತನ್ನ ಮೊದಲ ಸಮಗ್ರ ಅಣಕು ಕಾರ್ಯಾಚರಣೆಯನ್ನು (Integrated Mock Exercise) ನಡೆಸಲಿದೆ. ಈ ಬಾರಿ ವಿಮಾನ ನಿಲ್ದಾಣದ ಆವರಣದ ಹೊರಭಾಗದ ಗಡಿಗೆ ಹೊಂದಿಕೊಂಡಿರುವ ಸಮತಟ್ಟಾದ ಪ್ರದೇಶದಲ್ಲಿ ವಿಮಾನ ಅಪಘಾತ ಸಂಭವಿಸುವ ಸನ್ನಿವೇಶವನ್ನು ಸೃಷ್ಟಿಸಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಮಾರ್ಗದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ಈ ಅಭ್ಯಾಸವನ್ನು ಆಯೋಜಿಸಲಾಗಿದೆ. ಇದರ ಪೂರ್ವಭಾವಿಯಾಗಿ ನವೆಂಬರ್ 26ರಂದು 'ಟೇಬಲ್ ಟಾಪ್' (Table Top) ಕಾರ್ಯಾಚರಣೆ ನಡೆಯಲಿದೆ.
ತುರ್ತು ಸಂದರ್ಭದಲ್ಲಿ ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ತಂಡವು ಮೊದಲ ಸ್ಪಂದನಾ ತಂಡವಾಗಿ ಕಾರ್ಯನಿರ್ವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ನಿಯಂತ್ರಣ ಹಾಗೂ ಸಮನ್ವಯದ ಜವಾಬ್ದಾರಿ ವಹಿಸಿಕೊಳ್ಳಲಿದೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಮಂಗಳೂರು ನಗರ ಪೊಲೀಸ್, ಆರೋಗ್ಯ ಇಲಾಖೆ, ವಿವಿಧ ಆಸ್ಪತ್ರೆಗಳು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಸಂಸ್ಥೆಗಳು ಪಾಲ್ಗೊಳ್ಳಲಿವೆ.
ಗಂಭೀರ ವಿಮಾನ ದುರಂತದಂತಹ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ವಿವಿಧ ಇಲಾಖೆಗಳ ಸನ್ನದ್ಧತೆ, ಸ್ಪಂದಿಸುವ ಸಾಮರ್ಥ್ಯ ಮತ್ತು ಪರಸ್ಪರ ಸಮನ್ವಯವನ್ನು ಪರೀಕ್ಷಿಸಿ, ಕಾರ್ಯಾಚರಣೆಯಲ್ಲಿನ ಕೊರತೆಗಳನ್ನು ಗುರುತಿಸಿ ಸರಿಪಡಿಸುವುದು ಈ ಅಣಕು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ.