image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಕೃಷ್ಣ' ವಾಣಿಜ್ಯ ಸಮುಚ್ಚಯಕ್ಕೆ ಶಿಲಾನ್ಯಾಸ; ಲಯನ್ಸ್ ಸಮುದಾಯ ಭವನಕ್ಕೆ 4ನೇ ಮಹಡಿ ಖರೀದಿ ನಿರ್ಧಾರ

'ಕೃಷ್ಣ' ವಾಣಿಜ್ಯ ಸಮುಚ್ಚಯಕ್ಕೆ ಶಿಲಾನ್ಯಾಸ; ಲಯನ್ಸ್ ಸಮುದಾಯ ಭವನಕ್ಕೆ 4ನೇ ಮಹಡಿ ಖರೀದಿ ನಿರ್ಧಾರ

ಮಂಗಳೂರು: ನಂತೂರು-ಕದ್ರಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್-66) ಬಳಿ ‘ಅಥರ್ವ ಬಿಲ್ಡರ್ಸ್’ ಮತ್ತು ‘ಲೋಟಸ್ ಪ್ರೊಪರ್ಟೀಸ್’ ಸಂಸ್ಥೆಗಳ ನೂತನ ವಾಣಿಜ್ಯ ಸಮುಚ್ಚಯ ‘ಕೃಷ್ಣ’ ಇದರ ಶಿಲಾನ್ಯಾಸವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರಿನ ವಸತಿ ಮತ್ತು ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಯಲ್ಲಿ ಸಂಸ್ಥೆಯ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ಅವರ ಕೊಡುಗೆ ಶ್ಲಾಘನೀಯವಾಗಿದ್ದು, ಈ ಯೋಜನೆಯೂ ಯಶಸ್ವಿಯಾಗಲಿದೆ ಎಂದು ಹಾರೈಸಿದರು.

ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ ಪಡೀಲ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಗವರ್ನರ್ ಲಯನ್ ಕೆ.ಸಿ. ಪ್ರಭು ಮಾತನಾಡಿ, 1978ರಲ್ಲಿ ಆರಂಭವಾದ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಕಳೆದ 49 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲಿದೆ ಎಂದು ತಿಳಿಸಿದರು. ಸುವರ್ಣ ಮಹೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಹುಕಾಲದ ಕನಸಾದ ‘ಲಯನ್ಸ್ ಸಮುದಾಯ ಭವನ’ ನಿರ್ಮಾಣಕ್ಕಾಗಿ ‘ಕೃಷ್ಣ’ ವಾಣಿಜ್ಯ ಸಮುಚ್ಚಯದ ನಾಲ್ಕನೇ ಮಹಡಿಯನ್ನು ಟ್ರಸ್ಟ್ ವತಿಯಿಂದ ಖರೀದಿಸಲು ನಿರ್ಧರಿಸಲಾಗಿದೆ ಎಂದ ಅವರು, ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು.

ಕೆನರಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅವರು ‘ಕೃಷ್ಣ’ ಯೋಜನೆಯ ಕರಪತ್ರ ಬಿಡುಗಡೆಗೊಳಿಸಿ, ನಿರ್ಮಾಣ ಸಂಸ್ಥೆಯ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ, ಧನರಾಜ್ ಶೆಟ್ಟಿ ಹಾಗೂ ಜಾಗದ ಮಾಲೀಕ ವಾಮನ ಶೆಣೈ ಅವರಿಗೆ ಶುಭ ಕೋರಿದರು. ಜತೆಗೆ ಈಗಾಗಲೇ ಸಮುಚ್ಚಯದಲ್ಲಿ ಮಳಿಗೆ ಖರೀದಿಸಿದ ಗ್ರಾಹಕರನ್ನು ಅಭಿನಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಭಿಲಾಷ್ ಕಟೀಲ್ ವಂದಿಸಿದರು.

 

Category
ಕರಾವಳಿ ತರಂಗಿಣಿ