ಮಂಗಳೂರು: ವಿಶೇಷ ಚೇತನ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ, ವಿದ್ಯಾರ್ಥಿಗಳಲ್ಲಿ ಸಮಾನತೆ ಹಾಗೂ ಸಹಕಾರದ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ‘ಅಲೋಯ್ ಕ್ವಿಜ್-ವಿಜ್ 2026’ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್ನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು. ಸೈಂಟ್ ಅಲೋಶಿಯಸ್ ಹೈಯರ್ ಪ್ರೈಮರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವು ರೋಹನ್ ಕಾರ್ಪೊರೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಈ ವಿಶಿಷ್ಟ ಸ್ಪರ್ಧೆಯಲ್ಲಿ ನಗರದ 16 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರತಿ ತಂಡದಲ್ಲಿದ್ದ ಐವರು ವಿದ್ಯಾರ್ಥಿಗಳಲ್ಲಿ ಒಬ್ಬರು ದೃಷ್ಟಿದೋಷವುಳ್ಳವರು, ಒಬ್ಬರು ಮಾತು ಮತ್ತು ಶ್ರವಣ ದೋಷವುಳ್ಳವರು, ಒಬ್ಬರು ಸರ್ಕಾರಿ ಶಾಲೆ ಹಾಗೂ ಇಬ್ಬರು ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದುದು ಈ ಸ್ಪರ್ಧೆಯ ವಿಶೇಷತೆಯಾಗಿತ್ತು. ಡಾ. ಅಣ್ಣಪ್ಪ ಕಾಮತ್ ಅವರ ನಿರೂಪಣೆಯಲ್ಲಿ ‘ಪ್ರಿವೇಲ್ ವಿತ್ ಬ್ರೈಲ್’, ‘ಬಝಿಂಗ್ ಬೀಸ್’, ‘ನಾಲೆಜ್ ಈಸ್ ಯೂನಿವರ್ಸಲ್’, ‘ಆ್ಯಕ್ಷನ್ಸ್ ಸ್ಪೀಕ್ ಲೌಡರ್’ ಮತ್ತು ‘ಹಾರ್ಮನಿ ಇನ್ ಥಾಟ್’ ಎಂಬ ಐದು ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಸೈಂಟ್ ತೆರೇಸಾ ಐಸಿಎಸ್ಇ ಶಾಲೆ, ಶಕ್ತಿನಗರದ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಎಸ್ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ಸೈಂಟ್ ಅಲೋಶಿಯಸ್ ಹೈಯರ್ ಪ್ರೈಮರಿ ಶಾಲೆ, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಹೈಯರ್ ಪ್ರೈಮರಿ ಶಾಲೆ ಹಾಗೂ ಎಸ್ಡಿಎಂ ಮಂಗಳಜ್ಯೋತಿ ಇಂಟಿಗ್ರೇಟೆಡ್ ಶಾಲೆಯ ತಂಡಗಳು ದ್ವಿತೀಯ ಸ್ಥಾನ ಗಳಿಸಿದವು. ಇದೇ ಮೊದಲ ಬಾರಿಗೆ ‘ಅತ್ಯುತ್ತಮ ತಂಡ ಸ್ಫೂರ್ತಿ’ ಪ್ರಶಸ್ತಿಯನ್ನೂ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಚಿವ ಯು.ಟಿ. ಖಾದರ್ ಮಾತನಾಡಿ, ಮಕ್ಕಳನ್ನು ಒಂದೇ ವೇದಿಕೆಗೆ ತರುವ ಇಂತಹ ಅಂತರ್ಗತ ಕಾರ್ಯಕ್ರಮ ಆಯೋಜಿಸಿದ ಹಳೆ ವಿದ್ಯಾರ್ಥಿಗಳ ತಂಡವೇ ನಿಜವಾದ ವಿಜೇತರು ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ರೋನಿ ಪಾಯ್ಸ್, ರೋಹನ್ ಕಾರ್ಪೊರೇಷನ್ನ ಡಿಯೋನ್ ಮಾಂಟೆರೊ ಹಾಗೂ ಮೂಡಾ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.