image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಡುಪಿಯಲ್ಲಿ ಡಿಸೆಂಬರ್ 28ರಿಂದ 'ಶ್ರೀ ಶಂಕರ ವಿಜಯೋತ್ಸವ - 2026'

ಉಡುಪಿಯಲ್ಲಿ ಡಿಸೆಂಬರ್ 28ರಿಂದ 'ಶ್ರೀ ಶಂಕರ ವಿಜಯೋತ್ಸವ - 2026'

ಉಡುಪಿ: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಮಹತ್ವಪೂರ್ಣ ಕಾರ್ಯಗಳ ಪುಣ್ಯಸ್ಮರಣೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಶಯ ಮತ್ತು ಮಾರ್ಗದರ್ಶನದಂತೆ ಡಿಸೆಂಬರ್ 28, 29 ಮತ್ತು 30ರಂದು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ 'ಶ್ರೀ ಶಂಕರ ವಿಜಯೋತ್ಸವ - 2026' ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನವೆಂಬರ್ 22ರಂದು ಸಂಜೆ 4 ಗಂಟೆಗೆ ಮಂಗಳೂರಿನ ಶ್ರೀ ರಾಧಾಕೃಷ್ಣ ದೇವಸ್ಥಾನದ ಬಾಳಂಭಟ್ ಸಭಾಭವನದಲ್ಲಿ ಆರಂಭೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಸತ್ಯಶಂಕರ ಬೊಳ್ಳಾವ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

8ನೇ ಶತಮಾನದಲ್ಲಿ ಕೇರಳದ ಕಾಲಟಿಯಲ್ಲಿ ಅವತರಿಸಿದ ಶ್ರೀ ಆದಿಶಂಕರ ಭಗವತ್ಪಾದಾಚಾರ್ಯರು ಸಮಗ್ರ ಭಾರತದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ, ವೈದಿಕ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ವೇದೋಪನಿಷತ್ತುಗಳ ತತ್ವಗಳನ್ನು ಪ್ರಕಾಶಪಡಿಸಿ, ಅದ್ವೈತ ವೇದಾಂತವನ್ನು ಸರಳೀಕರಿಸಿ ಜನಸಾಮಾನ್ಯರಿಗೆ ಜ್ಞಾನ ಮಾರ್ಗವನ್ನು ಉಪದೇಶಿಸಿದ ಅವರು, ಧರ್ಮ ಸಂರಕ್ಷಣೆಗಾಗಿ ದೇಶದಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮೊದಲಿನದಾದ ಶೃಂಗೇರಿ ಶಾರದಾ ಪೀಠದಲ್ಲಿ ಗುರುಪರಂಪರೆ ಅವಿಚ್ಛಿನ್ನವಾಗಿ ಮುಂದುವರಿದಿದೆ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶೃಂಗೇರಿ ಮಠದ ಸುಮಾರು 40ಕ್ಕೂ ಅಧಿಕ ಶಿಷ್ಯ ಸಮುದಾಯಗಳಿದ್ದು, ಈ ವೈಭವಪೂರ್ಣ ಕಾರ್ಯಕ್ರಮದಲ್ಲಿ ಎಲ್ಲಾ ಶಿಷ್ಯ ಸಮುದಾಯದವರು, ಸಚಿವರು, ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಮತ್ತು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಶಂಕರ ವಿಜಯೋತ್ಸವ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಎಂಎಲ್‌ಸಿ ಹಾಗೂ ಆರ್ಥಿಕ ಸಮಿತಿಯ ಸಂಚಾಲಕರಾದ ಬಾಲಕೃಷ್ಣ ಭಟ್, ಪ್ರಚಾರ ಮತ್ತು ರಥಯಾತ್ರೆ ಸಮಿತಿಯ ಸಂಚಾಲಕರಾದ ಶ್ರೀ ಚಂದ್ರಶೇಖರ ಕೋಚಿಲ, ಸಮಿತಿಯ ಸದಸ್ಯರಾದ ದೇವದಾಸ್ ಮೇನಾಲ ಹಾಗೂ ಶಂಕರ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ನರೇಶ್ ಮಲ್ಲಿಗೆಮಾಡು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ