ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಸದಸ್ಯ ಸಂಸ್ಥೆಯಾದ ಕದ್ರಿ ಯಕ್ಷಬಳಗ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಪಾವಂಜೆ ಮೇಳದ 2026-27ನೇ ಸಾಲಿನ ತಿರುಗಾಟದ ವಿನೂತನ ಪೌರಾಣಿಕ ಯಕ್ಷಗಾನ ಪ್ರಸಂಗ 'ಮೋಹ ಮಾಧವಿ'ಯ ವಿಶೇಷ ಪರಾಮರ್ಶೆ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಕದ್ರಿ ಯಕ್ಷಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಹೇಳಿದರು. ಪ್ರೊ. ಪವನ್ ಕಿರಣಕೆರೆ ವಿರಚಿತ ಈ ನೂತನ ಪ್ರಸಂಗದ ಮೊದಲ ಪ್ರದರ್ಶನ ನವೆಂಬರ್ 22ರಂದು ಉಡುಪಿಯಲ್ಲಿ ನಡೆಯಲಿದ್ದು, ಮರುದಿನ ಅಂದರೆ ಸೋಮವಾರ ನವೆಂಬರ್ 23ರಂದು ಕದ್ರಿ ಮಂಜುನಾಥ ದೇವಸ್ಥಾನದ ರಾಜಾಂಗಣದಲ್ಲಿ ಮೇಳದ ಎರಡನೇ ಪ್ರದರ್ಶನ ಹಾಗೂ ಪ್ರಸಂಗದ ಕುರಿತಾದ ವಿಶೇಷ ವಿಮರ್ಶಾ ಗೋಷ್ಠಿ ಜರುಗಲಿದೆ.
ಹೊಸ ಪ್ರಸಂಗವನ್ನು ಕಲಾವಿದರು ರಂಗದ ಮೇಲೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಬೆಳೆಸಿಕೊಳ್ಳಬಹುದು ಮತ್ತು ಉತ್ತಮಪಡಿಸಬಹುದು ಎಂಬ ದೃಷ್ಟಿಯಿಂದ ನವೆಂಬರ್ 23ರಂದು ಅಪರಾಹ್ನ 3:00 ರಿಂದ 5:00 ಗಂಟೆಯವರೆಗೆ ಈ ಪರಾಮರ್ಶಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಭಾಗವಹಿಸಲಿದ್ದು, ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮ್ರತ ಎನ್., ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಪ್ರಸಂಗಕರ್ತ ಪವನ್ ಕಿರಣಕೆರೆ ಮತ್ತು ಮೇಳದ ಕಲಾವಿದರ ಸಮ್ಮುಖದಲ್ಲಿ ನಡೆಯುವ ಈ ಗೋಷ್ಠಿಯಲ್ಲಿ, ಮೊದಲ ದಿನದ ಪ್ರದರ್ಶನ ವೀಕ್ಷಿಸಿದ ಇಂದ್ರಾಳಿ ಜಯಕರ ಶೆಟ್ಟಿ, ಮಹೇಂದ್ರ ಆಚಾರ್ಯ ಹೇರಂಜೆ, ಡಾ. ಹರೀಶ್ ಜೋಶಿ ವಿಟ್ಲ (ಡಾ. ವಿದ್ಯಾ ಹರೀಶ್ ಜೋಶಿ) ಮತ್ತು ಶಶಿಧರ ಕಲ್ಲೂರಂಗಡಿ ಅವರು ಪ್ರದರ್ಶನದ ವಿಮರ್ಶೆ ನಡೆಸಲಿದ್ದಾರೆ.
ಅದೇ ದಿನ ಸಂಜೆ 6:30 ರಿಂದ 7:00 ಗಂಟೆಯವರೆಗೆ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ 'ಹಿರಿಯರ ಸಂಸ್ಮರಣೆ' ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಅರ್ಥಧಾರಿ ದಿ. ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸಂಸ್ಮರಣೆ ನೆರವೇರಲಿದೆ. ಈ ಸಂದರ್ಭದಲ್ಲಿ ಪಾವಂಜೆ ಮೇಳದ ಹಾಸ್ಯಗಾರ ಯಕ್ಷಗಾನ ಕಲಾವಿದ ಸಂದೇಶ ಮಂದಾರ ಅವರಿಗೆ ಕದ್ರಿ ಯಕ್ಷಬಳಗದ ಪರವಾಗಿ 'ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರತಿಭಾ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಈ ಸಂಜೆ ಕಾರ್ಯಕ್ರಮದಲ್ಲಿ ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ.ಜಿ. ಶೆಟ್ಟಿ ಉಪಸ್ಥಿತರಿರಲಿದ್ದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 7:00 ಗಂಟೆಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ (ಪಾವಂಜೆ ಮೇಳ) ವತಿಯಿಂದ 'ಮೋಹ ಮಾಧವಿ' ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ಮೋಹನ್ ಕೊಪ್ಪಳ ಕದ್ರಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಆಳ್ವ ಕದ್ರಿ, ಕೋಶಾಧಿಕಾರಿ ಶಿವಪ್ರಸಾದ ಪ್ರಭು ಹಾಗೂ ಉಪಾಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.