image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ವಿಶೇಷ ಚೇತನ ಮಕ್ಕಳಿಗೆ ಉಚಿತ ಇಂಟ್ಯೂಷನ್ ಪ್ರೋಸೆಸ್ ಶಿಬಿರ

ಮಂಗಳೂರಿನಲ್ಲಿ ವಿಶೇಷ ಚೇತನ ಮಕ್ಕಳಿಗೆ ಉಚಿತ ಇಂಟ್ಯೂಷನ್ ಪ್ರೋಸೆಸ್ ಶಿಬಿರ

ಮಂಗಳೂರು: ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡ ಘಟಕದ ವತಿಯಿಂದ ನಗರದ ವಿಶೇಷ ಚೇತನ ಮಕ್ಕಳಿಗೆ ದೀಪಾವಳಿಯ ಕೊಡುಗೆಯಾಗಿ ಉಚಿತ ಇಂಟ್ಯೂಷನ್ ಪ್ರೋಸೆಸ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕರಾದ ಶರಾವತಿ ನಾರಾಯಣ್ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ನವೆಂಬರ್ 17 ರಿಂದ 20ರವರೆಗೆ ಸೇವಾ ಭಾರತಿ ಸಂಸ್ಥೆಯ ಚೇತನ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್ ಮತ್ತು ರೋಮನ್ ಅಂಡ್ ಕ್ಯಾಥೆರಿನ್ ಲೋಬೋ ಸ್ಕೂಲ್ ಫಾರ್ ದ ಬ್ಲೈಂಡ್ ಶಾಲೆಗಳ ಸುಮಾರು 60 ಮಕ್ಕಳಿಗೆ ಈ ಶಿಬಿರವನ್ನು ನಡೆಸಲಾಗಿದೆ.

ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವ್ ಅವರು 12 ವರ್ಷದೊಳಗಿನ ಮಕ್ಕಳಿಗಾಗಿ ರೂಪಿಸಿರುವ ಯೋಗ ಮತ್ತು ಧ್ಯಾನ ಆಧಾರಿತ ಇಂಟ್ಯೂಷನ್ ಪ್ರೋಸೆಸ್, ಮಕ್ಕಳ ಆಂತರಿಕ ಸಾಮರ್ಥ್ಯಗಳನ್ನು ಹೊರತರುವುದರ ಜೊತೆಗೆ ಸೃಜನಶೀಲತೆ, ಅನ್ವೇಷಣಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಲು ನೆರವಾಗುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಯೋಚನೆ ಮೂಡಿಸುವ ಈ ಅಭ್ಯಾಸವು ವಿಶೇಷ ಅಗತ್ಯವಿರುವ ಮಕ್ಕಳಲ್ಲಿ ಕಲಿಕೆಯ ಆನಂದವನ್ನು ಹೆಚ್ಚಿಸಿ, ಅವರ ಬದುಕಿನಲ್ಲಿ ಹೊಸ ಬೆಳಕು ಮತ್ತು ಸಂತೋಷವನ್ನು ತರುವ ಗುರಿಯನ್ನು ಹೊಂದಿದೆ.

ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಅಂತಾರಾಷ್ಟ್ರೀಯ ಶಿಕ್ಷಕರಾದ ಶ್ರೀ ರಾಜೇಂದ್ರ ಸಿಂಗ್ ಗಾಂಧಿ ಅವರು 4 ದಿನಗಳ ಕಾಲ ಈ ತರಬೇತಿಯನ್ನು ನೀಡಿದ್ದಾರೆ. ಶಿಬಿರದ ಎಲ್ಲಾ ವೆಚ್ಚಗಳನ್ನು ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡವು ದಾನಿಗಳು, ಶಿಕ್ಷಕರು ಮತ್ತು ಸ್ವಯಂಸೇವಕರ ಸಹಕಾರದೊಂದಿಗೆ ಭರಿಸಿದೆ. 4 ದಿನಗಳ ತರಬೇತಿಯ ನಂತರವೂ ಆಯಾ ಶಾಲೆಗಳಲ್ಲಿ ಪ್ರತಿದಿನ ಈ ಅಭ್ಯಾಸವನ್ನು ಮುಂದುವರಿಸಲು ಸಂಕಲ್ಪ ಮಾಡಲಾಗಿದೆ. ಸೇವಾ ಭಾರತಿ ಮಂಗಳೂರು, ಚೇತನ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌ನ ಮುಖ್ಯೋಪಾಧ್ಯಾಯಿನಿ ಸುಪ್ರೀತಾ ಹಾಗೂ ರೋಮನ್ ಅಂಡ್ ಕ್ಯಾಥೆರಿನ್ ಲೋಬೋ ಸ್ಕೂಲ್ ಫಾರ್ ದ ಬ್ಲೈಂಡ್‌ನ ಸಂಯೋಜಕ ಕ್ಯಾಲಿಸ್ಟಸ್ ಡೇಸಾ ಸೇರಿದಂತೆ ಶಾಲಾ ಸಿಬ್ಬಂದಿ ನೀಡಿದ ಸಹಕಾರಕ್ಕೆ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ರಜಿನಿ ರಾಯ್, ಅಮಿತಾ ಸುಧೀರ್, ಬ್ರಜೇಶ್ ವರ್ಣ ಮತ್ತು ಅಂಬರ ಮಲ್ಲಿಯ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ