ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಪ್ರಸ್ತುತ ಗೌರವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ, ಸಾರ್ವಜನಿಕ ಕ್ಷೇತ್ರದ ಹಲವಾರು ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿ ನಿರ್ವಹಿಸಿ, 2012 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮಾತ್ರವಲ್ಲದೆ, ಗಣರಾಜ್ಯೋತ್ಸವ ಪ್ರಶಸ್ತಿ, ಆದರ್ಶ ಶೃಂಗ ಪ್ರಶಸ್ತಿ, ಸೌರಭ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸಹಿತ ಹಲವು ಗೌರವ ಸನ್ಮಾನಗಳು ಪಡೆದಿರುವ ದೈವನರ್ತಕ ಲೋಕಯ್ಯ ಸೇರಾ ಅವರಿಗೆ ಕರ್ನಾಟಕ ಸರ್ಕಾರದಿಂದ ಕೊಡಲಾಗುವ ಜಾನಪದ ಕ್ಷೇತ್ರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಂಗು ಮತ್ತು ಅಕ್ಕು ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದ ಇವರು, ಹಿರಿಯರಿಂದ ದೈವಾರಾಧನೆ ಮತ್ತು ದೈವನರ್ತನವನ್ನು ಕಲೆಯನ್ನೇ ಬದುಕಾಗಿಸಿಕೊಂಡಿರುವವರು. ಕಳೆದ 57 ವರ್ಷಗಳಿಂದ ಜಾನಪದ ಕಲಾವಿದನಾಗಿ, ದೈವಾರಾಧನೆಯ ಕ್ಷೇತ್ರದಲ್ಲಿ ಭೂತಕಟ್ಟುವ ನರ್ತಕ-ಪಾತ್ರಿಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ತುಳುನಾಡಿನ ದೈವಗಳಾದ ಕಲ್ಲುರ್ಟಿ, ಕಲ್ಕುಡ, ಪಂಜುರ್ಲಿ, ಚಾಮುಂಡಿ, ಧೂಮಾವತಿ, ರಕೇಶ್ವರಿ ಇತ್ಯಾದಿಗಳಿಗೆ ನೇಮಗಳನ್ನು ಕಟ್ಟಿರುತ್ತಾರೆ. ವರ್ಷಕ್ಕೆ ಸರಿ ಸುಮಾರು ನೂರರಂತೆ ಇದುವರೆಗೆ ಸಾವಿರಾರು ಭೂತಗಳನ್ನು ನೇಮ ಕಟ್ಟಿ ಸೈ ಎನಿಅಇಕೊಂಡವರು. ಕುಲದೈವ, ಸೀಮೆದೈವ, ರಾಜನ್ ದೈವಗಳ ನೇಮ ವಹಿಸಿರುವುದಲ್ಲದೆ ಹತ್ತು-ಹಲವು ಊರ ಜಾತ್ರೆಗಳಲ್ಲೂ ಪ್ರಧಾನ ದೈವಗಳ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ತುಳುನಾಡಿನ ಮೌಖಿಕ ಸಾಹಿತ್ಯವೆನಿಸಿದ ಸಂಧಿ, ದೈವಪುರಾಣಗಳನ್ನು ಪರಂಪರಾನುಗತವಾಗಿ ಅಭ್ಯಾಸಿಸಿ, ದೈವಾರಾಧನೆಯ ಸಂದರ್ಭದಲ್ಲಿ ಆಯಾಯ ದೈವಗಳಿಗೆ ಸಂಬಂಧಿಸಿದ ಸಂಧಿ, ಮದಿಪುಗಳನ್ನು ಬಾಯಿಪಾಠವಾಗಿ ಒಪ್ಪಿಸುವಷ್ಟು ಪ್ರಭುತ್ವವನ್ನು ಹೊಂದಿರುತ್ತಾರೆ.