image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೇಡಿಕೆ ಈಡೇರದಿದ್ದರೆ ನ. 25ರಿಂದ ರಾಜ್ಯಾದ್ಯಂತ ಕೋಳಿ ಸಾಕಾಣಿಕೆ ಸ್ಥಗಿತ: ವಿಧಾನಸೌಧ ಚಲೋ ಎಚ್ಚರಿಕೆ

ಬೇಡಿಕೆ ಈಡೇರದಿದ್ದರೆ ನ. 25ರಿಂದ ರಾಜ್ಯಾದ್ಯಂತ ಕೋಳಿ ಸಾಕಾಣಿಕೆ ಸ್ಥಗಿತ: ವಿಧಾನಸೌಧ ಚಲೋ ಎಚ್ಚರಿಕೆ

ಮಂಗಳೂರು: ಕನಿಷ್ಠ ಸಾಕಾಣಿಕೆ ವೆಚ್ಚ (ಗ್ರೋಯಿಂಗ್ ಚಾರ್ಜ್) ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನವೆಂಬರ್ 25ರಂದು ಬೆಂಗಳೂರಿನಲ್ಲಿ 'ವಿಧಾನಸೌಧ ಚಲೋ' ಹಾಗೂ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಕೋಳಿ ಸಾಕಾಣಿಕೆ ಸ್ಥಗಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೋಳಿ ಬೆಳೆಗಾರರ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಪ್ರಭಾಕರ್ ಸುವರ್ಣ ತಿಳಿಸಿದ್ದಾರೆ. ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು. 2026ರ ಮೇ ತಿಂಗಳಲ್ಲಿ ಸರಕಾರ ಪ್ರತಿ ಕೆ.ಜಿ.ಗೆ ₹10 ಸಾಕಾಣಿಕೆ ದರ ಹೆಚ್ಚಿಸಲು ಅನುಮೋದನೆ ನೀಡಿದ್ದರೂ, ಆರು ತಿಂಗಳು ಕಳೆದರೂ ಇಂಟಿಗ್ರೇಷನ್ ಕಂಪನಿಗಳು ಅದನ್ನು ಜಾರಿಗೊಳಿಸಿಲ್ಲ. ಕಳೆದ ಆರು ವರ್ಷಗಳಿಂದ ಕಂಪನಿಗಳು ಪ್ರತಿ ಕೆ.ಜಿ.ಗೆ ಕೇವಲ ₹6.20 ದರವನ್ನೇ ನೀಡುತ್ತಿವೆ. ಮಾರುಕಟ್ಟೆಯಲ್ಲಿ ಕೋಳಿ ದರ ₹100-150ಕ್ಕೆ ಏರಿಕೆಯಾಗಿದ್ದರೂ, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ವಿದ್ಯುತ್ ಹಾಗೂ ಕಾರ್ಮಿಕರ ವೆಚ್ಚ ಭರಿಸುವ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಪಶುಸಂಗೋಪನಾ ಸಚಿವರು ಹಾಗೂ ಕುಕ್ಕುಟ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಕಂಪನಿಗಳೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ. ಹೀಗಾಗಿ ನವೆಂಬರ್ 24ರ ಒಳಗೆ ಕಂಪನಿಗಳು ಸಭೆ ನಡೆಸಿ ₹10 ಕನಿಷ್ಠ ದರವನ್ನು ಜಾರಿಗೊಳಿಸದಿದ್ದರೆ, ನ. 25ರಿಂದ ಕೋಳಿ ಮರಿಗಳನ್ನು ಪಡೆಯುವುದನ್ನು ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ತೀವ್ರ ಹೋರಾಟ ನಡೆಸಲಾಗುವುದು. ಅಲ್ಲದೆ, ಕೆಎಂಎಫ್ ಮಾದರಿಯಲ್ಲಿ ಕೋಳಿ ಸಾಕಾಣಿಕೆ ಸಹಕಾರ ಮಹಾಮಂಡಳಿ ಹಾಗೂ ಕರ್ನಾಟಕ ಕೋಳಿ ನಿಯಂತ್ರಣ ಮತ್ತು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕೆಂದು ಒಕ್ಕೂಟ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಕುಮಾರ್ ಕಡೆಂಜಿಗುತ್ತು ಮತ್ತು ಸನತ್ ಮುಳುಗಾಡು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ