ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಅತ್ಯಂತ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (IISc) ಜಂಟಿಯಾಗಿ ಆಯೋಜಿಸಿರುವ 15ನೇ ದ್ವೈವಾರ್ಷಿಕ 'ಲೇಕ್ ಕಾನ್ಫರೆನ್ಸ್–2026'ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳಲ್ಲಿ ಸುಮಾರು 6,800 ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿದ್ದು, ಈ ಪೈಕಿ ನಮ್ಮ ಭಾಗದಲ್ಲಿಯೇ 3,500 ಪ್ರಭೇದಗಳಿವೆ. ಇಂತಹ ಅಪರೂಪದ ಜೀವವೈವಿಧ್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದರು.
ಎತ್ತಿನಹೊಳೆ ಮತ್ತು ಪ್ರಸ್ತಾಪಿತ ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆಯಂತಹ ಬೃಹತ್ ಯೋಜನೆಗಳಿಂದ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಹಿಂದೆ ಎತ್ತಿನಹೊಳೆ, ಬಿಸಿಲೆ ಘಾಟ್ ಭಾಗದಲ್ಲಿ ಕಾಣಿಸುತ್ತಿದ್ದ ನೀಲಗಿರಿ ಮಾರ್ಟೆನ್ಗಳು ಕಳೆದ 15 ವರ್ಷಗಳಿಂದ ಕಣ್ಮರೆಯಾಗಿವೆ. ಇಂತಹ ಯೋಜನೆಗಳಿಂದ ಸಿಂಗಳಿಕದಂತಹ ಅಪರೂಪದ ಪ್ರಭೇದಗಳಿಗೆ ಅಪಾಯ ಎದುರಾಗಬಹುದು. ಕೋಲಾರದಂತಹ ಬರಪೀಡಿತ ಪ್ರದೇಶಗಳ ರೈತರಿಗೆ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿಯಾದರೂ, ಒಂದು ಭಾಗದ ನೀರಿನ ಬವಣೆ ನೀಗಿಸಲು ಮತ್ತೊಂದು ಭಾಗದ ಪರಿಸರಕ್ಕೆ ಹಾನಿ ಮಾಡದೆ ಪರ್ಯಾಯ ಹಾಗೂ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
150 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4.73 ಲಕ್ಷ ಎಕರೆಯಷ್ಟಿದ್ದ ಭತ್ತದ ಕೃಷಿ ಇಂದು ಜಲಮೂಲಗಳ ಕೊರತೆಯಿಂದ ಗಣನೀಯವಾಗಿ ಕುಸಿದಿದೆ. ಬೆಂಗಳೂರಿನಲ್ಲಿ ನದಿಯಾಗಿದ್ದ ವೃಷಭಾವತಿ ಇಂದು ಕಲುಷಿತಗೊಂಡಿರುವುದು ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಿರುವುದಕ್ಕೆ ನಿದರ್ಶನವಾಗಿದೆ. ಈ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆಯು 'ಹಸಿರು ಸಂವಾದ' ಅಭಿಯಾನದ ಮೂಲಕ 56 ಗ್ರಾಮಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದು, ಮುಂದಿನ ಜನವರಿ 6 ಮತ್ತು 7ರಂದು ಆಳ್ವಾಸ್ನಲ್ಲಿ ಎರಡು ದಿನಗಳ ಪರಿಸರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸಂಶೋಧನೆಗಳು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವಂತಿರಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶಿಸರ, ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಯಶವಂತ ಡೋಂಗ್ರೆ, ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಟಿ.ವಿ. ರಾಮಚಂದ್ರ, ಡಾ. ಎಂ.ಡಿ. ಸುಭಾಷ್ ಚಂದ್ರನ್ ಹಾಗೂ ಪ್ರಾಧ್ಯಾಪಕ ಡಾ. ಶ್ರೀಶ ಚೊಕ್ಕಾಡಿ ಉಪಸ್ಥಿತರಿದ್ದರು.