ಮಂಗಳೂರು: ಕೊಂಕಣಿ ಕಥೊಲಿಕ್ ಉದ್ಯಮಿಗಳ, ವೃತ್ತಿಪರರ ಮತ್ತು ಕೃಷಿಕರ ಸಂಸ್ಥೆ ‘ರಚನಾ’ ನವೆಂಬರ್ 3ರಂದು ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಜಾನ್ ಮೊಂತೇರೊ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಭಾನುವಾರ ಸಂಜೆ 6 ಗಂಟೆಗೆ ಕುಲಶೇಖರದ ಕೊರ್ಡೆಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುಣೆಯ ಮಿಲಿಟರಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಮಾಂಡೆಂಟ್ ಆಗಿರುವ ರಿಯರ್ ಆ್ಯಡ್ಮಿರಲ್ ನೆಲ್ಸನ್ ಡಿಸೋಜ ಭಾಗವಹಿಸಲಿದ್ದಾರೆ. ಎನ್‍ಆರ್‍ಐ ಉದ್ಯಮಿ ಮೈಕಲ್ ಡಿಸೋಜ, ರೋಹನ್ ಕಾರ್ಪೋರೇಶನ್‍ನ ಚೇರ್’ಮ್ಯಾನ್ ರೋಹನ್ ಮೊಂತೇರೊ ಮುಖ್ಯ ಅತಿಥಿಯಾಗಿರುವರು. ಬೆಂಗಳೂರಿನ ಆರ್ಚ್ ಬಿಶಪ್ ಪೀಟರ್ ಮಚಾದೊ ಉದ್ಘಾಟಿಸಲಿದ್ದು, ಮಂಗಳೂರಿನ ಬಿಶಪ್ ಪೀಟರ್ ಪಾವ್ಲ್ ಸಲ್ಡಾನ್ಹ ಅಧ್ಯಕ್ಷತೆ ವಹಿಸಲಿದ್ದಾರೆ. ರಚನಾ ಅಧ್ಯಕ್ಷ ಜಾನ್ ಮೊಂತೇರೊ, ಬೆಳ್ಳಿ ಹಬ್ಬದ ಸಮಾರಂಭದ ಸಂಚಾಲಕಿ ಮಾರ್ಜರಿ ಟೆಕ್ಸೇರಾ ಉಪಸ್ಥಿತರಿರುವರು ಎಂದರು.
25 ವರ್ಷಗಳ ಸವಿನೆನಪಿಗಾಗಿ ಕೊಂಕಣಿ ಕ್ರೈಸ್ತ ಸಮುದಾಯದ ಯುವ ಉದ್ಯಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ರಚನಾ ಕಥೊಲಿಕ್ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಸಮಾರಂಭದಲ್ಲಿ ಇದರ ಉದ್ಘಾಟನೆ ನೆರವೇರಲಿದೆ.
ಈ ಸಂದರ್ಭದಲ್ಲಿ ರಚನಾ ಪ್ರಾರಂಭಿಸಲು ಕಾರಣಕರ್ತರಾದ ಮಾರಿಟ್ಟೊ ಸಿಕ್ವೇರಾ ಅವರನ್ನು ಸನ್ಮಾನಿಸಲಾಗುವುದು. ರಚನಾದ ಉಗಮ ಮತ್ತು ನಡೆದು ಬಂದ ಹಾದಿಯ ಬಗ್ಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾರ್ಜೊರಿ ಟೆಕ್ಸೇರಾ, ಸಂಚಾಲಕಿ, ಜೆ.ಆರ್. ಲೋಬೊ, ಕಾರ್ಯಕಾರಿ ಸಮಿತಿ, ರೊಯ್ ಕ್ಯಾಸ್ತೆಲಿನೊ, ಕಾರ್ಯಕಾರಿ ಸಮಿತಿ, ವಿಜಯ್ ವಿಶ್ವಾಸ್ ಲೋಬೊ, ಕಾರ್ಯದರ್ಶಿ,ನೆಲ್ಸನ್ ಮೊಂತೇರೊ, ಕೋಶಾಧಿಕಾರಿ ಉಪಸ್ಥಿತರಿದ್ದರು.