image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಪ್ರಬೋಧ 26 ವಿಶೇಷ ಉಪನ್ಯಾಸ ಮಾಲಿಕೆ: ಸ್ವಾಮಿ ಸರ್ವಪ್ರಿಯಾನಂದ ಮಹಾರಾಜರಿಂದ ಜೀವನ ಮೌಲ್ಯಗಳ ಚಿಂತನೆ

ಮಂಗಳೂರಿನಲ್ಲಿ ಪ್ರಬೋಧ 26 ವಿಶೇಷ ಉಪನ್ಯಾಸ ಮಾಲಿಕೆ: ಸ್ವಾಮಿ ಸರ್ವಪ್ರಿಯಾನಂದ ಮಹಾರಾಜರಿಂದ ಜೀವನ ಮೌಲ್ಯಗಳ ಚಿಂತನೆ

ಮಂಗಳೂರು: ನಗರದ ರಾಮಕೃಷ್ಣ ಮಠದ ವತಿಯಿಂದ ನವೆಂಬರ್ 21 ಮತ್ತು 22ರಂದು 'ಪ್ರಬೋಧ '26 – Awakening Minds • Enriching Lives' ಎಂಬ ವಿಶೇಷ ಎರಡು ದಿನಗಳ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ ಎಂದು ಮಠದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಿತಕಾಮಾನಂದಜಿ ಅವರು ತಿಳಿಸಿದರು.

ನಗರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು,  ಅಮೆರಿಕದ ನ್ಯೂಯಾರ್ಕ್‌ನ ವೇದಾಂತ ಸೊಸೈಟಿಯ ರೆಸಿಡೆಂಟ್ ಮಿನಿಸ್ಟರ್ ಹಾಗೂ ಆಧ್ಯಾತ್ಮಿಕ ನಾಯಕರಾದ ಸ್ವಾಮಿ ಸರ್ವಪ್ರಿಯಾನಂದ ಮಹಾರಾಜ್ ಅವರು ಈ ಸರಣಿ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದರು.

ಆಧುನಿಕ ಜೀವನದ ಸವಾಲುಗಳು, ಶಿಕ್ಷಣ, ತಂತ್ರಜ್ಞಾನ, ವೃತ್ತಿಜೀವನ, ಆರೋಗ್ಯ ಸೇವೆ ಹಾಗೂ ಯುವಜನತೆಯ ಜೀವನದ ಕುರಿತು ವೇದಾಂತದ ಶಾಶ್ವತ ಜ್ಞಾನವನ್ನು ಸಮಕಾಲೀನ ದೃಷ್ಟಿಕೋನದೊಂದಿಗೆ ಪರಿಚಯಿಸುವುದು ಈ ಉಪನ್ಯಾಸ ಮಾಲಿಕೆಯ ಮುಖ್ಯ ಉದ್ದೇಶವಾಗಿದೆ. ವಿವಿಧ ಕ್ಷೇತ್ರಗಳ ಜನರನ್ನು ಗಮನದಲ್ಲಿಟ್ಟುಕೊಂಡು ಒಟ್ಟು ಐದು ವಿಶೇಷ ಉಪನ್ಯಾಸಗಳನ್ನು ರೂಪಿಸಲಾಗಿದೆ. ಮೊದಲ ಉಪನ್ಯಾಸವು ನವೆಂಬರ್ 21ರಂದು ಬೆಳಗ್ಗೆ 9:30ರಿಂದ ಮಧ್ಯಾಹ್ನ 12ರವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ "The Power of Focus in an Age of Distraction" ಎಂಬ ವಿಷಯದ ಕುರಿತು ಡಿಜಿಟಲ್ ವ್ಯಾಕುಲತೆಗಳ ನಡುವೆ ಏಕಾಗ್ರತೆ, ಗಮನ, ಮಾನಸಿಕ ಸ್ಪಷ್ಟತೆ ಮತ್ತು ಉದ್ದೇಶಪೂರ್ವಕ ಜೀವನದ ಬಗ್ಗೆ ಚರ್ಚಿಸಲಾಗುವುದು. ಅದೇ ದಿನ ಸಂಜೆ 5ರಿಂದ 7ರವರೆಗೆ ಸುರತ್ಕಲ್‌ನ ಎನ್‌ಐಟಿಕೆ (NITK) ಯಲ್ಲಿ "Can AI Be Conscious? – Intelligence, Awareness and the Vedantic Perspective" ಎಂಬ ವಿಷಯದ ಕುರಿತು ಎರಡನೇ ಉಪನ್ಯಾಸ ನಡೆಯಲಿದೆ.

ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಬೋಧಕ ವರ್ಗದವರಿಗಾಗಿ ಆಯೋಜಿಸಿರುವ ಇದರಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಬುದ್ಧಿಮತ್ತೆ ಮತ್ತು ಪ್ರಜ್ಞೆಯ ಸ್ವರೂಪವನ್ನು ವೇದಾಂತದ ದೃಷ್ಟಿಕೋನದಿಂದ ವಿಶ್ಲೇಷಿಸಲಾಗುವುದು.
ನವೆಂಬರ್ 22ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಐಟಿ ಕ್ಷೇತ್ರದವರು ಹಾಗೂ ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿರುವ ಉದ್ಯೋಗಿಗಳಿಗಾಗಿ "Success Without Losing Your Peace – Karma Yoga for Work and Life" ಎಂಬ ಮೂರನೇ ಉಪನ್ಯಾಸ ನಡೆಯಲಿದ್ದು, ಕಾರ್ಯಕ್ಷಮತೆ, ಕರ್ತವ್ಯನಿಷ್ಠೆ ಮತ್ತು ಆಂತರಿಕ ಶಾಂತಿಯ ಸಮತೋಲನದ ಕುರಿತು ಕರ್ಮಯೋಗದ ಹಿನ್ನೆಲೆಯಲ್ಲಿ ತಿಳಿಸಿಕೊಡಲಾಗುವುದು ಎಂದರು.

ಅಂದು ಮಧ್ಯಾಹ್ನ 2ರಿಂದ 4ರವರೆಗೆ ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗಾಗಿ "Who Heals the Healer? – Burnout, Inner Strength and Meaning in Medicine" ಎಂಬ ನಾಲ್ಕನೇ ಉಪನ್ಯಾಸವನ್ನು ಆಯೋಜಿಸಲಾಗಿದ್ದು, ವೃತ್ತಿಜೀವನದ ಒತ್ತಡ, ಕರುಣೆ, ಆಂತರಿಕ ಶಕ್ತಿ ಹಾಗೂ ವೈದ್ಯಕೀಯ ಸೇವೆಯ ಉನ್ನತ ಉದ್ದೇಶದ ಕುರಿತು ಚಿಂತನೆಗೆ ಅವಕಾಶ ಕಲ್ಪಿಸಲಾಗಿದೆ. ಕೊನೆಯದಾಗಿ, ನವೆಂಬರ್ 22ರಂದು ಸಂಜೆ 6ರಿಂದ 8ರವರೆಗೆ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಸಾರ್ವಜನಿಕರಿಗಾಗಿ "The Search for Lasting Happiness – What Vedanta Can Teach Us" ಎಂಬ ಐದನೇ ಉಪನ್ಯಾಸ ನಡೆಯಲಿದ್ದು, ಮಾನವನ ನಿಜವಾದ ಸಂತೋಷ ಮತ್ತು ಅರ್ಥಪೂರ್ಣ ಜೀವನದ ಅನ್ವೇಷಣೆಯಲ್ಲಿ ವೇದಾಂತದ ಮಾರ್ಗದರ್ಶನವನ್ನು ವಿವರಿಸಲಾಗುವುದು.
'ಪ್ರಬೋಧ '26' ಮೂಲಕ ವೇದಾಂತದ ಶಾಶ್ವತ ಜ್ಞಾನವನ್ನು ಆಧುನಿಕ ಜೀವನದೊಂದಿಗೆ ಬೆಸೆಯುವ ಪ್ರಯತ್ನ ಮಾಡಲಾಗಿದೆ. ಈ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಮಕೃಷ್ಣ ಮಠ ಮತ್ತು ಮಿಷನ್ ಆತ್ಮೀಯವಾಗಿ ಆಹ್ವಾನಿಸಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿ ತಮ್ಮ ಹೆಸರುಗಳನ್ನು ಆಶ್ರಮದ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ