image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೈಜ್ಞಾನಿಕ ಸಂಶೋಧನೆಯೊಂದಿಗೆ ಪ್ರಕೃತಿ ಚಿಕಿತ್ಸೆ ಬೆಳೆಯಲಿ: ಡಾ. ಅರುಣ್ ಪಿ.ಜಿ.

ವೈಜ್ಞಾನಿಕ ಸಂಶೋಧನೆಯೊಂದಿಗೆ ಪ್ರಕೃತಿ ಚಿಕಿತ್ಸೆ ಬೆಳೆಯಲಿ: ಡಾ. ಅರುಣ್ ಪಿ.ಜಿ.

ಮೂಡುಬಿದಿರೆ: ಪ್ರಕೃತಿ ಚಿಕಿತ್ಸೆಯನ್ನು ಕೇವಲ ಸಾಂಪ್ರದಾಯಿಕ ವಿಧಾನಗಳಿಗೆ ಸೀಮಿತಗೊಳಿಸದೆ, ವೈಜ್ಞಾನಿಕ ಸಂಶೋಧನೆ ಹಾಗೂ ಇತರ ವೈದ್ಯಕೀಯ ಪದ್ಧತಿಗಳ ಸಹಯೋಗದೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸುವ ಅಗತ್ಯವಿದೆ ಎಂದು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಪಿ.ಜಿ. ಅಭಿಪ್ರಾಯಪಟ್ಟರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಯೋಗ ಸಭಾಂಗಣದಲ್ಲಿ ಸೋಮವಾರ ನಡೆದ 9ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರಕೃತಿ ಚಿಕಿತ್ಸೆಯು ಕೇವಲ ಶಿಬಿರಗಳು ಹಾಗೂ ಉಪನ್ಯಾಸಗಳಿಗೆ ಸೀಮಿತವಾಗದೆ, ಜನರ ಬಳಿಗೆ ನೇರವಾಗಿ ತೆರಳಿ ನೈಸರ್ಗಿಕ ಜೀವನಶೈಲಿಯ ಬಗ್ಗೆ ಅರಿವು ಮೂಡಿಸಬೇಕು. ವ್ಯಕ್ತಿಯಲ್ಲಿನ ಒತ್ತಡ ಮತ್ತು ಮಾನಸಿಕ ಸಮಸ್ಯೆಗಳಿಗೆ ರಾಗ ಹಾಗೂ ದ್ವೇಷ ಪ್ರಮುಖ ಕಾರಣಗಳೆಂದು ಪತಂಜಲಿ ಯೋಗಸೂತ್ರದಲ್ಲಿ ವಿವರಿಸಲಾಗಿದೆ. ಯಾವುದೇ ವೈದ್ಯಕೀಯ ಪದ್ಧತಿಯನ್ನು ತಿರಸ್ಕರಿಸದೆ, ಸಹಯೋಗದ ಸಂಶೋಧನೆ ನಡೆಸುವ ಮೂಲಕ ರೋಗಿಗಳಿಗೆ ಉತ್ತಮ ಆರೋಗ್ಯ ಫಲಿತಾಂಶ ನೀಡಬೇಕು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಚಿಕಿತ್ಸಾ ತತ್ವಗಳನ್ನು ವೈಜ್ಞಾನಿಕ ಜ್ಞಾನದೊಂದಿಗೆ ಸಮನ್ವಯಗೊಳಿಸಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಮಿಯೋಪಥಿ ಕಾಲೇಜಿನ ಪ್ರಾಚಾರ್ಯ ಡಾ. ರೋಶನ್ ಪಿಂಟೋ ಮಾತನಾಡಿ, ಸರಿಯಾದ ಆಹಾರ, ಕ್ರಮಬದ್ಧ ಉಸಿರಾಟ ಮತ್ತು ಸಕಾರಾತ್ಮಕ ಚಿಂತನೆ ನೈಸರ್ಗಿಕ ಆರೋಗ್ಯದ ಮೂಲಾಧಾರಗಳು. ಇಂದಿನ ಒತ್ತಡದ ಬದುಕಿನಲ್ಲಿ ಜನರು ತಾತ್ಕಾಲಿಕ ಪರಿಹಾರ ನೀಡುವ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಅವು ಶಾಶ್ವತ ಪರಿಹಾರವಲ್ಲ. ವಿದ್ಯಾರ್ಥಿಗಳು ಆಳವಾದ ಜ್ಞಾನ ಸಂಪಾದಿಸಿ, ಈ ವರ್ಷದ ಧ್ಯೇಯವಾಕ್ಯವಾದ ‘ನಿಜವಾದ ಪ್ರಕೃತಿ ಚಿಕಿತ್ಸೆ, ಆರೋಗ್ಯವಂತ ಭಾರತ’ ಆಶಯವನ್ನು ಸಾಕಾರಗೊಳಿಸಲು ಶ್ರಮಿಸಬೇಕು ಎಂದರು.

ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು. ಆಶಾದ್ ವಿಜೇತರ ಹೆಸರುಗಳನ್ನು ವಾಚಿಸಿದರು. ಡಾ. ಜ್ಯೋತಿ ಸ್ವಾಗತಿಸಿ, ಡಾ. ಭೂಮಿಕಾ ವಂದಿಸಿದರು. ಶಿಭಾನಿ ಕಾರ್ಯಕ್ರಮ ನಿರೂಪಿಸಿದರು.

 

Category
ಕರಾವಳಿ ತರಂಗಿಣಿ