ಉಜಿರೆ: ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಉಜಿರೆಯ ಸಿದ್ಧವನದ ರುಡ್ಸೆಟ್ (RUDSET) ಸಂಸ್ಥೆಯ ವತಿಯಿಂದ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್ ಪ್ರಾಯೋಜಕತ್ವ ಹಾಗೂ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾರ್ಗದರ್ಶನದಲ್ಲಿ ಈ ತರಬೇತಿಗಳು ನಡೆಯಲಿವೆ.
ನವೆಂಬರ್ 23 ರಿಂದ ಡಿಸೆಂಬರ್ 5 ರವರೆಗೆ 13 ದಿನಗಳ 'ಕೃಷಿ ಉದ್ಯಮಿ', ನವೆಂಬರ್ 25 ರಿಂದ ಡಿಸೆಂಬರ್ 24 ರವರೆಗೆ 30 ದಿನಗಳ 'ಪುರುಷರ ಪಾರ್ಲರ್ ಮತ್ತು ಸಲೂನ್ ಉದ್ಯಮ' ಹಾಗೂ ನವೆಂಬರ್ 27 ರಿಂದ ಡಿಸೆಂಬರ್ 8 ರವರೆಗೆ 12 ದಿನಗಳ 'ಲಘು ಉದ್ಯಮಿ - ಫಾಸ್ಟ್ ಫುಡ್ ಸ್ಟಾಲ್' ತರಬೇತಿಗಳನ್ನು ಆಯೋಜಿಸಲಾಗಿದೆ.
18 ರಿಂದ 50 ವರ್ಷ ವಯೋಮಿತಿಯೊಳಗಿನ, ಕನ್ನಡ ಓದಲು ಮತ್ತು ಬರೆಯಲು ಬರುವ ಆಸಕ್ತರು ಈ ತರಬೇತಿಗಳಿಗೆ ಅರ್ಜಿ ಸಲ್ಲಿಸಬಹುದು. ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ವಯಸ್ಸು, ವಿದ್ಯಾರ್ಹತೆ ಹಾಗೂ ಪಡೆಯಲು ಇಚ್ಛಿಸುವ ತರಬೇತಿಯ ಹೆಸರನ್ನು ಬರೆದು 8904064507, 9980885900 ಅಥವಾ 9380626695 ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.