ಪುಣೆ/ಮಂಗಳೂರು : ಮಹಾರಾಷ್ಟ್ರದ ಪುಣೆಯ ಯಶವಂತ ರಾವ್ ಚೌಹಾಣ್ ಸಭಾಂಗಣದಲ್ಲಿ ನವೆಂಬರ್ 14ರಂದು ಅಖಿಲ ಭಾರತೀಯ ಕೊಂಕಣಿ ಪರಿಷದ್ ವತಿಯಿಂದ ಆಯೋಜಿಸಲಾಗಿದ್ದ 34ನೇ ಅಖಿಲ ಭಾರತೀಯ ಕೊಂಕಣಿ ಅಧಿವೇಶನವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ, ಪುಣೆ ಅಧಿವೇಶನದ ಅಧ್ಯಕ್ಷರು ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ ಅವರು 2026-28ನೇ ಸಾಲಿನ ಅಖಿಲ ಭಾರತೀಯ ಕೊಂಕಣಿ ಪರಿಷದ್‌ನ ಗೌರವ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಿದರು. ಜೊತೆಗೆ, ವಿಶ್ವ ಕೊಂಕಣಿ ಕೇಂದ್ರದ ಪ್ರಕಾಶನದ ‘ಗೋವಾದ ಮಾತೃದೇವತೆಯರ ಉಪಾಸನೆ’ ಎಂಬ ಕಾಫಿ ಟೇಬಲ್ ಪುಸ್ತಕವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಷದ್‌ನ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಕಾರ್ಯದರ್ಶಿ ಸ್ನೇಹಾ ಸಬ್ನೀಸ್, ಸ್ವಾಗತಾಧ್ಯಕ್ಷೆ ಡಾ. ಅಶ್ವಿನಿ ಜಾಂಭೇಕರ್ ಕುಲಕರ್ಣಿ, ವಿಶೇಷ ಆಹ್ವಾನಿತ ಸಾಹಿತಿ ಅರುಣಾ ಢೇರೆ, ವರ್ಧನಿಯ ಪ್ರವರ್ತಕಿ ಉಷಾ ಶೆಣೈ, ಅನ್ನು ಪುಂಡಲೀಕ ಪೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.