image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾಂಡ್ ಸೊಭಾಣ್‌ನಿಂದ ನಿರಂತರ ಗಾಯನ ಗಿನ್ನೆಸ್ ದಾಖಲೆಯು ಕೊಂಕಣಿ ಸಂಸ್ಕೃತಿಯ ವಿಜಯ- ಡಾ. ರೊನಾಲ್ಡ್ ಕೊಲಾಸೊ

ಮಾಂಡ್ ಸೊಭಾಣ್‌ನಿಂದ ನಿರಂತರ ಗಾಯನ ಗಿನ್ನೆಸ್ ದಾಖಲೆಯು ಕೊಂಕಣಿ ಸಂಸ್ಕೃತಿಯ ವಿಜಯ- ಡಾ. ರೊನಾಲ್ಡ್ ಕೊಲಾಸೊ

ಮಂಗಳೂರು: ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ 'ಬಹು ಗಾಯಕರ ವಿಭಾಗ'ದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ಕಾಲ ನಿರಂತರ ಗಾಯನ ಪ್ರಸ್ತುತಪಡಿಸುವ ಮೂಲಕ ಸಾಂಸ್ಕೃತಿಕ ಸಂಘಟನೆ 'ಮಾಂಡ್ ಸೊಭಾಣ್' ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ. ನಗರದ ಪುರಭವನದಲ್ಲಿ (ಟೌನ್ ಹಾಲ್) ಭಾನುವಾರ (ನವೆಂಬರ್ 15) ನಡೆದ ಭವ್ಯ ಸಮಾರೋಪ ಸಮಾರಂಭದಲ್ಲಿ ಲಂಡನ್‌ನ ಗಿನ್ನೆಸ್ ವಿಶ್ವದಾಖಲೆ ಸಂಸ್ಥೆಯ ತೀರ್ಪುಗಾರ ಸ್ವಪ್ನಿಲ್ ದಂಗಾರಿಕರ್ ಅವರು ಅಧಿಕೃತ ದಾಖಲೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಖ್ಯಾತ ದಾನಿ ಡಾ. ರೊನಾಲ್ಡ್ ಕೊಲಾಸೊ, ಮಾಂಡ್ ಸೊಭಾಣ್‌ನ ಶಿಸ್ತು ಮತ್ತು ಸಂಘಟನಾ ಚಾತುರ್ಯವನ್ನು ಶ್ಲಾಘಿಸಿದರು. ಈ ದಾಖಲೆಯನ್ನು ಮುರಿಯಲು ಕೇವಲ ಮಾಂಡ್ ಸೊಭಾಣ್‌ನಿಂದ ಮಾತ್ರ ಸಾಧ್ಯ ಎಂದ ಅವರು, ಸಂಸ್ಥಾಪಕ ಎರಿಕ್ ಒಝೇರಿಯೊ ಅವರ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಸಮರ್ಪಣೆಯನ್ನು ಸ್ಮರಿಸಿದರು. ಇದು ಕೊಂಕಣಿ ಸಮುದಾಯ ವಿಜಯೋತ್ಸವ ಆಚರಿಸುವ ಕ್ಷಣ ಎಂದು ಬಣ್ಣಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಎರಿಕ್ ಒಝೇರಿಯೊ ಅವರು ಕೊಂಕಣಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು. ಜಾತಿ, ಧರ್ಮಗಳನ್ನು ಮೀರಿದ ಏಕತೆಗೆ ಈ ಮಹಾ ಸಮ್ಮೇಳನ ಸಾಕ್ಷಿಯಾಗಿದ್ದು, ಕೊಂಕಣಿ ಸಮುದಾಯವು ಇಡೀ ಕರಾವಳಿ ಪ್ರದೇಶಕ್ಕೆ ಹೆಮ್ಮೆ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಉಸ್ತುವಾರಿ ಡಾ. ಆರತಿ ಕೃಷ್ಣ ಅವರು ಮುಖ್ಯಮಂತ್ರಿಗಳ ಪರವಾಗಿ ಶುಭಾಶಯ ಕೋರಿ, ಪೂರ್ವನಿಗದಿತ ಕಾರ್ಯಕ್ರಮಗಳ ಒತ್ತಡದಿಂದ ಮುಖ್ಯಮಂತ್ರಿಗಳಿಗೆ ಬರಲು ಸಾಧ್ಯವಾಗದಿದ್ದರೂ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸರ್ಕಾರದಿಂದ ₹1 ಕೋಟಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಜಾಗತಿಕ ಕೊಂಕಣಿ ಪ್ರತಿಭೆಗಳನ್ನು ಒಂದೇ ಸೂರಿನಡಿ ತರುವ ಎರಿಕ್ ಒಝೇರಿಯೊ ಅವರ ಕನಸನ್ನು ನನಸಾಗಿಸಲು ₹3 ಕೋಟಿ ವೆಚ್ಚದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು. 300 ತಂಡಗಳು, 7,235 ಗಾಯಕರು ಮತ್ತು 4,596 ಹಾಡುಗಳೊಂದಿಗೆ ಈ ದಾಖಲೆ ಮೂಡಿಬಂದಿದ್ದು, ಇದರ ಯಶಸ್ಸು ಎಲ್ಲಾ ಕಲಾವಿದರು, ಸ್ವಯಂಸೇವಕರು ಮತ್ತು ದಾನಿಗಳಿಗೆ ಸಲ್ಲುತ್ತದೆ ಎಂದರು. ಮುಂದಿನ ಕಾರ್ಯಕ್ರಮವಾಗಿ ಡಿಸೆಂಬರ್ 6 ರಂದು ಕಲಾಂಗಣದಲ್ಲಿ 'ಬೈಲಾ ಇಂಟರ್‌ನ್ಯಾಷನಲ್ ಸೂಪರ್ ಶೋ' ನಡೆಯಲಿದೆ ಎಂದು ಘೋಷಿಸಿದರು.

ಸಮಾರಂಭದಲ್ಲಿ ದಾಖಲೆ ಪ್ರಯತ್ನದ ಮುಖ್ಯ ಸಂಗೀತ ನಿರ್ದೇಶಕ ಜೋಯೆಲ್ ಪಿರೇರಾ ಅವರನ್ನು ಶಾಲು, ಪೇಟ (ಉರ್ಮಾಲ್) ಮತ್ತು ಚಿನ್ನದ ಪದಕ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರಮುಖ ಸಂಗೀತ ನಿರ್ವಾಹಕರಾದ ಅನಿಲ್ ಪತ್ರಾವೊ, ಫಾ. ಆಲ್ವಿನ್ ಸಿಕ್ವೇರಾ, ಆಲ್ವಿನ್ ನೊರೊನ್ಹಾ (ಬಜಪೆ) ಮತ್ತು ಸೈಮನ್ ಪಾಯಸ್ ಬಜಾಲ್ ಅವರನ್ನು ಗೌರವಿಸಲಾಯಿತು. ಮಹಾ ಸಮ್ಮೇಳನದ ಪ್ರಮುಖ ದಾನಿಗಳು ಹಾಗೂ ರೋನಿ ಅರುಣ್, ವಿಕಾಸ್ ಲಸ್ರಾದೊ, ಸ್ವೀತಾ ಸಲ್ಡಾನಾ ಮತ್ತು ರೊಮಾರಿಯೊ ಪಿಂಟೊ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವಿಷನ್ ಕೊಂಕಣಿಯ ಮೈಕೆಲ್ ಡಿಸೋಜ, ಜಾಯ್ಸ್ ಒಝೇರಿಯೊ, ಹಣಕಾಸು ಸಮಿತಿ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ, ಕಲಾಂಗಣ ಸಮಿತಿ ಅಧ್ಯಕ್ಷ ರೊನಾಲ್ಡ್ ಮೆಂಡೋನ್ಸಾ, ಸಂಯೋಜಕ ಸ್ಟ್ಯಾನಿ ಅಲ್ವಾರಿಸ್, ಉಪಾಧ್ಯಕ್ಷ ನವೀನ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಖಜಾಂಚಿ ಎಲ್ರಾನ್ ರೊಡ್ರಿಗಸ್ ಹಾಗೂ ಗೋವಾ ಪ್ರತಿನಿಧಿ ಮೈಕೆಲ್ ಗ್ರೇಸಿಯಸ್ ಉಪಸ್ಥಿತರಿದ್ದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ