ಮೂಡುಬಿದಿರೆ: ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ) ವಿದ್ಯಾರ್ಥಿಗಳ ಸ್ಟಾರ್ಟ್ಅಪ್ 'ಲೊರೆಂಟಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್', ಕರ್ನಾಟಕ ಸರ್ಕಾರದ ಪ್ರತಿಷ್ಠಿತ 'ಇಲೆವೇಟ್ ಶಕ್ತಿ-2026' ಯೋಜನೆಯಡಿ 38 ಲಕ್ಷ ರೂ. ಅನುದಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಕರ್ನಾಟಕ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ (ಕೆ-ಟೆಕ್) ಮೂಲಕ ಈ ಅನುದಾನ ಮಂಜೂರಾಗಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾವೀನ್ಯತೆ ಮತ್ತು ಸ್ಟಾರ್ಟ್ಅಪ್ ಇನ್ಕ್ಯುಬೇಷನ್ ಕೇಂದ್ರವಾದ 'ಆಳ್ವಾಸ್ ಟೆಕ್ನಾಲಜಿ ಸೆಂಟರ್'ನಲ್ಲಿ ಅಭಿವೃದ್ಧಿಗೊಂಡಿರುವ ಲೊರೆಂಟಾ ಟೆಕ್ನಾಲಜೀಸ್, ದೈನಂದಿನ ಬದುಕಿನಲ್ಲಿ ದಾಖಲೆಗಳ ಮುದ್ರಣದ ಅಗತ್ಯವನ್ನು ಸರಳಗೊಳಿಸುವ ಉದ್ದೇಶದಿಂದ ಸ್ವಯಂಚಾಲಿತ ಡಾಕ್ಯುಮೆಂಟ್ ವೆಂಡಿಂಗ್ ಯಂತ್ರವನ್ನು ರೂಪಿಸಿದೆ. 'ಪ್ರಿಂಟ್ ಪಾಯಿಂಟ್' ಎಂಬ ಬ್ರ್ಯಾಂಡ್ ಹೆಸರಿನಲ್ಲಿ ತಯಾರಾಗಿರುವ ಈ ಉತ್ಪನ್ನವು ಜನಸಾಮಾನ್ಯರ ಅಗತ್ಯಕ್ಕೆ ತಂತ್ರಜ್ಞಾನವನ್ನು ಹತ್ತಿರವಾಗಿಸುವ ಪ್ರಯತ್ನವಾಗಿದೆ. ಎಐಇಟಿಯ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ರಂಜನಾ ಪ್ರಸಾದ್ ಸಿ.ಎಚ್., ಪ್ರಸನ್ನ, ಸುಹಾಸ್, ಮನೋಜ್ ಹಾಗೂ ಡೇಟಾ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಸಮರ್ಥ್ ಜೋಶಿ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ನವೀನ ಆಲೋಚನೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ತಾಂತ್ರಿಕ ಬೆಂಬಲ ನೀಡುತ್ತಿರುವ ಆಳ್ವಾಸ್ ಟೆಕ್ನಾಲಜಿ ಸೆಂಟರ್ ಅಡಿಯಲ್ಲಿ ಇದುವರೆಗೆ 13ಕ್ಕೂ ಹೆಚ್ಚು ಸ್ಟಾರ್ಟ್ಅಪ್ ಮತ್ತು ಆ್ಯಪ್ಗಳು ರೂಪುಗೊಂಡಿದ್ದು, 10 ಪೂರ್ಣ ಪ್ರಮಾಣದ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ಸಂಸ್ಥೆಯಲ್ಲಿ ಎಐಸಿಟಿಇ ಐಡಿಯಾ ಲ್ಯಾಬ್, ಸರ್ಫೇಸ್ ಮೌಂಟ್ ಟೆಕ್ನಾಲಜಿ ಲ್ಯಾಬ್, ಎನ್ವಿಡಿಯಾ ಲ್ಯಾಬ್ ಮತ್ತು ಐಬಿಎಂ ಎಐ ಲ್ಯಾಬ್ಗಳನ್ನು ಸ್ಥಾಪಿಸಲಾಗಿದ್ದು, ಕೈಗಾರಿಕಾ ಸಂಸ್ಥೆಗಳ ಸಿಎಸ್ಆರ್ ಸಹಭಾಗಿತ್ವದಲ್ಲಿ ಇನ್ನಷ್ಟು ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ವರ್ಷವೂ ಆಳ್ವಾಸ್ನ ವಿದ್ಯಾರ್ಥಿ ಸ್ಟಾರ್ಟ್ಅಪ್ 'ವಿಧ್ಸೂತ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್', ಮಣಿಪಾಲ್ ಯೂನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (ಎಂಯುಟಿಬಿಐ) ಮೂಲಕ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 'ನಿಧಿ-ಪ್ರಯಾಸ್' ಯೋಜನೆಯಡಿ 9 ಲಕ್ಷ ರೂ. ಅನುದಾನ ಪಡೆದುಕೊಂಡಿತ್ತು.
ವಿದ್ಯಾರ್ಥಿಗಳು ಕೇವಲ ಉದ್ಯೋಗ ಅರಸುವವರಾಗದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ಯಮಿಗಳಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ಆಳ್ವಾಸ್ ಟೆಕ್ನಾಲಜಿ ಸೆಂಟರ್ ಪೂರಕ ವಾತಾವರಣ ಕಲ್ಪಿಸುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಎಐಇಟಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ದೇವಿದಾಸ್ ಭಟ್, ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಅಸ್ಲಂ ನಂದ್ಯಾಲ್ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ವೇಣು ರಾವ್ ದೇವ ಅಭಿನಂದನೆ ಸಲ್ಲಿಸಿದ್ದಾರೆ.