image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕ್ರೀಡೆಗಳಿಂದ ಮಾನವೀಯ ಮೌಲ್ಯಗಳ ಉದ್ದೀಪನ: ಪ್ರೊ. ಎಸ್. ಸತೀಶ್ಚಂದ್ರ

ಕ್ರೀಡೆಗಳಿಂದ ಮಾನವೀಯ ಮೌಲ್ಯಗಳ ಉದ್ದೀಪನ: ಪ್ರೊ. ಎಸ್. ಸತೀಶ್ಚಂದ್ರ

ಉಜಿರೆ : ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಯೊಂದಿಗೆ ಸೋಲು-ಗೆಲುವನ್ನು ಕ್ರೀಡಾಸ್ಪೂರ್ತಿಯಿಂದ ಸಮಾನವಾಗಿ ಸ್ವೀಕರಿಸುವ ಗುಣ, ಆತ್ಮವಿಶ್ವಾಸ, ಧೈರ್ಯ ಹಾಗೂ ಆದರ್ಶ ನಾಯಕತ್ವದಂತಹ ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಹೇಳಿದರು. 2027ರ ಫೆಬ್ರವರಿಯಲ್ಲಿ ಕಾರ್ಕಳದಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಅಂಗವಾಗಿ ದಕ್ಷಿಣ ಕನ್ನಡ ಜೈನ ಯುವಜನ ಸಂಘದ ಆಶ್ರಯದಲ್ಲಿ ಶನಿವಾರ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಭಗವಾನ್ ಬಾಹುಬಲಿ ಟ್ರೋಫಿ ಕಬಡ್ಡಿ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಹುಬಲಿ ಸ್ವಾಮಿಯವರ ಅಹಿಂಸೆ, ತ್ಯಾಗ ಮತ್ತು ಸಂಯಮದಂತಹ ಜೀವನಮೌಲ್ಯಗಳು ಸಾರ್ವಕಾಲಿಕವಾಗಿವೆ. ಯುವಜನತೆ ಇವುಗಳಿಂದ ಪ್ರೇರಣೆ ಪಡೆದು, ಮುಂಬರುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶ್ರದ್ಧಾ-ಭಕ್ತಿಯಿಂದ ಸ್ವಯಂಸೇವಕರಾಗಿ ಸೇವೆ ಸಲ್ಲಿಸಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಕಳ ಮಹಾಮಸ್ತಕಾಭಿಷೇಕದ ಒಂದು ದಿನದ ಸೇವೆಯನ್ನು ತಮ್ಮ ಸಂಸ್ಥೆಯ ವತಿಯಿಂದ ನೆರವೇರಿಸುವುದಾಗಿ ಪ್ರಕಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜೈನ ಯುವಜನ ಸಂಘದ ಅಧ್ಯಕ್ಷ ರಂಜಿತ್ ಕೆ. ಪಡಿವಾಳ್ ಮಾತನಾಡಿ, ಯುವಜನತೆಯನ್ನು ಸಂಘಟಿಸಿ ಪವಿತ್ರ ಸೇವಾಕಾರ್ಯದಲ್ಲಿ ತೊಡಗಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಸನ್ಮತಿಕುಮಾರ್, ನೋಟರಿ ಶಶಿಕಿರಣ್ ಜೈನ್, ರಸಾಯನಶಾಸ್ತ್ರ ಉಪನ್ಯಾಸಕ ನವೀನ ಜೈನ್, ಉಜಿರೆಯ ಧೀಮತಿ ಮಹಿಳಾ ಸಮಾಜದ ಅಧ್ಯಕ್ಷೆ ಅಶ್ವಿನಿ ಪ್ರವೀಣ್ ಕುಮಾರ್ ಮತ್ತು ಅಮೃತ್ ಟೆಕ್ಸ್‌ಟೈಲ್ಸ್ ಮಾಲೀಕ ಪ್ರಶಾಂತ್ ಕುಮಾರ್ ನೆಲ್ಲಿಕಾರು ಉಪಸ್ಥಿತರಿದ್ದರು. ಪ್ರದೀಪ್ ಜೈನ್ ನೆಲ್ಲಿಕಾರು ಸ್ವಾಗತಿಸಿದರು. ಸುಮಂತ್ ಜೈನ್ ವಂದಿಸಿದರು. ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ