ಮೂಡುಬಿದಿರೆ: ತ್ಯಾಜ್ಯವನ್ನು ಮರುಬಳಕೆಯ ಮೂಲಕ ಸಂಪತ್ತಾಗಿ ಪರಿವರ್ತಿಸುವ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿಶೇಷ ತ್ಯಾಜ್ಯ ನಿರ್ವಹಣಾ ಜ್ಞಾನ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ಹಸಿರು ಸಂವಾದದ ಅಂಗವಾಗಿ ನಡೆದ ‘ತ್ಯಾಜ್ಯದಿಂದ ಸಂಪತ್ತು’ ಕುರಿತ ಕಾರ್ಯಕ್ರಮದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳನ್ನು ಕ್ಷೇತ್ರ ಅಧ್ಯಯನಕ್ಕಾಗಿ ಇಂದೋರ್ಗೆ ಕಳುಹಿಸಲು ಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಇಂದೋರ್ನ ನಿಪ್ಟನ್ ವೇಸ್ಟ್ ಸೊಲ್ಯೂಷನ್ಸ್ ನಿರ್ದೇಶಕ ಸುಧೀರ್ ಪುಲೋರಿಯಾ, ತೇವ, ಒಣ, ಗೃಹಬಳಕೆಯ ಅಪಾಯಕಾರಿ ಮತ್ತು ಸ್ಯಾನಿಟರಿ ತ್ಯಾಜ್ಯವನ್ನು ಮೂಲದಲ್ಲಿಯೇ ವೈಜ್ಞಾನಿಕವಾಗಿ ವಿಂಗಡಿಸಿ ಸಂಸ್ಕರಿಸಿದಾಗ ಮಾತ್ರ ಅದಕ್ಕೆ ಸಂಪನ್ಮೂಲದ ಮೌಲ್ಯ ದೊರೆಯುತ್ತದೆ ಎಂದರು. ಪ್ಲಾಸ್ಟಿಕ್ ಮರುಸಂಸ್ಕರಣೆ ಹಾಗೂ ಸಾವಯವ ತ್ಯಾಜ್ಯದಿಂದ ಕಾಂಪೋಸ್ಟ್ ಮತ್ತು ಜೈವಿಕ ಅನಿಲ ಉತ್ಪಾದಿಸುವ ವೃತ್ತಾಕಾರ ಆರ್ಥಿಕ ವ್ಯವಸ್ಥೆಯ ಅಗತ್ಯವನ್ನು ವಿವರಿಸಿದ ಅವರು, ಇದರ ಯಶಸ್ಸಿಗೆ ಸ್ಥಳೀಯ ಸಂಸ್ಥೆಗಳು, ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಮಗ್ರ ಸಹಭಾಗಿತ್ವ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವುದು ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಹೊಣೆಗಾರಿಕೆಯನ್ನು ಹೆಚ್ಚಿಸುವುದು ಈ ಪ್ರಯತ್ನದ ಮುಖ್ಯ ಉದ್ದೇಶವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ತಿಳಿಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಸುತ್ತಮುತ್ತಲಿನ ಉದ್ಯಮಗಳ ಮುಖ್ಯಸ್ಥರು, ಪರಿಸರ ಹೋರಾಟಗಾರರು ಹಾಗೂ ಹಸಿರು ಸಂವಾದ ಆಂದೋಲನದ ಕಾರ್ಯಕರ್ತರು ಉಪಸ್ಥಿತರಿದ್ದರು.