ಮಂಗಳೂರು : ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಸ್ವಾಯತ್ತ) 2026ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭವು ನವೆಂಬರ್ 14ರಂದು ಕಾಲೇಜಿನ ಕಲಾಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 120 ಎಂಬಿಎ, 120 ಎಂಸಿಎ ಹಾಗೂ 3 ಎಂಬಿಎ (ಐಇವಿ) ಸೇರಿದಂತೆ ಒಟ್ಟು 243 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎನ್ಆರ್ಐ ಉದ್ಯಮಿ ಹಾಗೂ ಸಮಾಜಸೇವಕ ಮೈಕೆಲ್ ಡಿಸೋಜ ಮಾತನಾಡಿ, ಪದವಿಯು ವೃತ್ತಿಜೀವನದ ಆರಂಭವಷ್ಟೇ ಆಗಿದ್ದು, ಜೀವನದಲ್ಲಿ ವಿನಯ, ತಾಳ್ಮೆ ಮತ್ತು ದೃಢಸಂಕಲ್ಪದಿಂದ ಮುನ್ನಡೆಯುವಂತೆ ಕರೆ ನೀಡಿದರು. ವ್ಯಕ್ತಿತ್ವ ಮತ್ತು ಉತ್ತಮ ಮನೋಭಾವವೇ ಭವಿಷ್ಯವನ್ನು ರೂಪಿಸುತ್ತವೆ ಎಂದ ಅವರು, ವಿಫಲತೆಗಳಿಂದ ಪಾಠ ಕಲಿಯುವ ಹಾಗೂ ಆರ್ಥಿಕ ಶಿಸ್ತನ್ನು ಬೆಳೆಸಿಕೊಳ್ಳುವ ಮಹತ್ವವನ್ನು ತಿಳಿಸಿದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ಸ್ವಿಂಕ್ಪೇ ಫಿನ್ಟೆಕ್ ಪ್ರೈವೇಟ್ ಲಿಮಿಟೆಡ್ನ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಹಿತೇಶ್ ಎನ್. ಕಾಮತ್ ಮಾತನಾಡಿ, ಶೈಕ್ಷಣಿಕ ಅಂಕಗಳು ಉದ್ಯೋಗ ಪ್ರವೇಶಕ್ಕೆ ಸಹಕಾರಿಯಾದರೂ, ಪರಿಶ್ರಮ, ಬದ್ಧತೆ ಮತ್ತು ಸತತ ಪ್ರಯತ್ನಗಳೇ ಯಶಸ್ಸಿನ ದಾರಿ ಎಂದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಂತ್ರಜ್ಞಾನವನ್ನು ಅವಲಂಬಿಸುವುದಕ್ಕಿಂತ ಸ್ವತಂತ್ರವಾಗಿ ಆಲೋಚಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಪದವೀಧರರಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಎಸ್ಜೆಇಸಿ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ದಾನ್ಹಾ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪ್ರೀತಿ, ದಯೆ, ಉತ್ತಮ ಗುಣಗಳು ಮತ್ತು ಪರಸ್ಪರ ಸಹಕಾರದ ಮೌಲ್ಯಗಳು ಎಂದಿಗೂ ಶಾಶ್ವತ ಎಂದು ಅಭಿಪ್ರಾಯಪಟ್ಟರು. ಆಫ್ರಿಕನ್ ತತ್ವವಾದ 'ಉಬುಂಟು' ಉಲ್ಲೇಖಿಸಿ, ಪರಸ್ಪರ ಗೌರವ ಮತ್ತು ಸಾಮೂಹಿಕ ಬೆಳವಣಿಗೆಯ ಮಹತ್ವವನ್ನು ವಿವರಿಸಿದರು.
ಇದೇ ವೇಳೆ ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜ ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳ ಪರವಾಗಿ ಎಂಬಿಎ ವಿಭಾಗದ ರಿಯಾ ಮೊನಾಲಿಸಾ ಡಿ’ಸೋಜಾ ಹಾಗೂ ಎಂಸಿಎ ವಿಭಾಗದ ಚೈತನ್ಯ ಪಿ. ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪಿಎಚ್.ಡಿ ಪದವಿ ಪಡೆದ ಬೋಧಕರು, ವಿಶ್ವವಿದ್ಯಾಲಯದ ರ್ಯಾಂಕ್ ವಿಜೇತರು, ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕರನ್ನು ಗೌರವಿಸಲಾಯಿತು ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ನಿರ್ದೇಶಕ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ರಿಯೋ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು. ಸಹಾಯಕ ನಿರ್ದೇಶಕ ವಂ. ಫಾ. ಕೆನ್ನೆತ್ ಆರ್. ಕ್ರಾಸ್ತಾ, ವಿವಿಧ ಡೀನ್ಗಳು, ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕಿ ಡಾ. ಸುಮಂಗಲಾ ಎನ್. ವಂದಿಸಿದರು. ಅನಂತ್ ರೋಹಿತ್ ಭಟ್ ಹಾಗೂ ಐಶ್ವರ್ಯ ಆರ್. ಆಚಾರ್ಯ ನಿರೂಪಿಸಿದರು.