image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಾ. ಎಂ. ಮೋಹನ ಆಳ್ವರ ಅಮೃತ ಮಹೋತ್ಸವ: 15 ಕೋಟಿ ರೂ. ವೆಚ್ಚದ ಸಮಾಜಮುಖಿ ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ

ಡಾ. ಎಂ. ಮೋಹನ ಆಳ್ವರ ಅಮೃತ ಮಹೋತ್ಸವ: 15 ಕೋಟಿ ರೂ. ವೆಚ್ಚದ ಸಮಾಜಮುಖಿ ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ

ಮಂಗಳೂರು : ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆಯ ಮೂಲಕ ನಾಡಿನಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ಅಭಿವೃದ್ಧಿ, 10 ಸಾವಿರ ಮಂದಿಗೆ ಉಚಿತ ಡಯಾಲಿಸಿಸ್ ಹಾಗೂ ವೃದ್ಧರ ಘನತೆಯ ಬದುಕಿಗೆ ನೆರವಾಗುವ 'ಹ್ಯಾಪಿ ಡೆತ್' (Happy Death) ನಂತಹ ಮಹತ್ವಾಕಾಂಕ್ಷೆಯ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಚಿಂತನೆ ನಡೆಸಲಾಗಿದೆ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡ ತಿಳಿಸಿದರು.

ಡಾ. ಎಂ. ಮೋಹನ ಆಳ್ವ ಅಭಿನಂದನಾ ಸಮಿತಿ–2027ರ ಆಶ್ರಯದಲ್ಲಿ ಮಂಗಳೂರಿನ ವಾಮಂಜೂರು ಬಳಿಯ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆದ ಅಮೃತ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮೋಹನ ಆಳ್ವರು ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಯ ಮೂಲಕ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆಯಾಗಿದ್ದಾರೆ. ಅವರ ಸೇವಾ ಮನೋಭಾವ ಮತ್ತು ಸಮಾಜಮುಖಿ ಚಿಂತನೆ ಮುಂದಿನ ಪೀಳಿಗೆಗೂ ತಲುಪಬೇಕು. ಅಮೃತ ಮಹೋತ್ಸವವನ್ನು ಕೇವಲ ಅಭಿನಂದನೆ ಮತ್ತು ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾದ ಯೋಜನೆಗಳ ಮೂಲಕ ಸಾರ್ಥಕಗೊಳಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿದೆ. ಆಳ್ವರಿಂದ ಶಿಕ್ಷಣ ಪಡೆದ ಲಕ್ಷಾಂತರ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ 'ಗುರುದಕ್ಷಿಣೆ' ಸಲ್ಲಿಸುವ ವಿನೂತನ ಪರಿಕಲ್ಪನೆಯಡಿ ನಿಧಿ ಸಂಗ್ರಹಿಸುವ ಚಿಂತನೆಯೂ ಇದ್ದು, ಸಂಗ್ರಹವಾಗುವ ಸಂಪೂರ್ಣ ನಿಧಿಯನ್ನು ಬಡವರ ಆರೋಗ್ಯ ಸೇವಾ ಯೋಜನೆಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ವಿವರಿಸಿದರು.

ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಎಂ. ಮೋಹನ ಆಳ್ವ ಅವರು, ತಮ್ಮ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಗೆ ಮುಂದಾಗಿರುವ ಆತ್ಮೀಯರು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು. ತಮ್ಮ ಈವರೆಗಿನ ಸಾಧನೆ ಕೇವಲ ವೈಯಕ್ತಿಕ ಪರಿಶ್ರಮದ ಫಲವಲ್ಲ; ಅದು ಎಲ್ಲರ ಸಹಕಾರ, ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದಗಳಿಂದ ಸಾಧ್ಯವಾಗಿದೆ. ಜೀವನದ ಪ್ರತಿಕ್ಷಣವನ್ನೂ ಹೊಸತನ್ನು ಕಾಣುವ ಮತ್ತು ಸಮಾಜಕ್ಕೆ ಒಳಿತನ್ನು ಬಯಸುವ ಆಶಯದೊಂದಿಗೆ ಕಳೆದಿದ್ದೇನೆ. ಅಮೃತ ಮಹೋತ್ಸವವು ಕೇವಲ ಜನ್ಮದಿನದ ಆಚರಣೆಯಾಗದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಾಗೂ ಉನ್ನತ ಜೀವನಮೌಲ್ಯಗಳನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಬೇಕು. ತಾವು ಯಾವುದೇ ವೈಭವ ಅಥವಾ ವಿಜೃಂಭಣೆಯ ಸಮಾರಂಭವನ್ನು ಬಯಸುವುದಿಲ್ಲ. ಬದಲಾಗಿ ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯಗಳ ಮೂಲಕ ಈ ದಿನವನ್ನು ಸಾರ್ಥಕಗೊಳಿಸಬೇಕು. ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳೇ ತಮಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಎಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಡಾ. ಮೋಹನ ಆಳ್ವರ ಕನಸುಗಳು ಅತ್ಯಂತ ವಿಶಾಲವಾಗಿದ್ದು, ಅವುಗಳಿಗೆ ನಾವೆಲ್ಲರೂ ಒಗ್ಗೂಡಿ ಜೀವ ತುಂಬಬೇಕಿದೆ. ಅವರ ಅಭಿನಂದನಾ ಕಾರ್ಯಕ್ರಮ ಮತ್ತು ಅಮೃತ ಮಹೋತ್ಸವವು ಕೇವಲ ಒಂದು ಸಮಾರಂಭಕ್ಕೆ ಸೀಮಿತವಾಗದೆ, ಸಮಾಜಕ್ಕೆ ಉಪಯುಕ್ತವಾದ ಶಾಶ್ವತ ಸೇವಾ ಕಾರ್ಯವಾಗಿ ಹೊರಹೊಮ್ಮಲಿದೆ. ಈ ಸಾರ್ಥಕ ಕಾರ್ಯದಲ್ಲಿ ಪೇಜಾವರ ಮಠವೂ ಕೈಜೋಡಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರಲ್ಲದೆ, ಸಮಿತಿಗೆ ಒಂದು ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, ಕರಾವಳಿಯ ಹೆಮ್ಮೆಯ ಸಾಧಕರಾದ ಡಾ. ಮೋಹನ ಆಳ್ವರ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ತಮ್ಮ ಸೌಭಾಗ್ಯ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮೂಡುಬಿದಿರೆಯನ್ನು ರಾಜ್ಯಕ್ಕೇ ಮಾದರಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವಲ್ಲಿ ಮೋಹನ ಆಳ್ವರ ಕೊಡುಗೆ ಮಹತ್ವದ್ದಾಗಿದ್ದು, ಅವರ ಸಮಾಜಮುಖಿ ಬದುಕು ಮತ್ತು ನಿರಂತರ ಕ್ರಿಯಾಶೀಲತೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು. ಚಂದ್ರಹಾಸ ಶೆಟ್ಟಿ ಮಾತನಾಡಿ, ಮೋಹನ ಆಳ್ವರ ಸರಳ ವ್ಯಕ್ತಿತ್ವ ಮತ್ತು ಸೇವಾ ಮನೋಭಾವಕ್ಕೆ ಗೌರವ ಸಲ್ಲಿಸುವ ರೀತಿಯಲ್ಲಿ ಅಮೃತ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಯಾವುದೇ ದುಂದು ವೆಚ್ಚಕ್ಕೆ ಅವಕಾಶ ನೀಡದೆ, ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳಿಗೆ ನಿಧಿ ಸಂಗ್ರಹಿಸಲಾಗುವುದು; ಎಲ್ಲ ಹಿತೈಷಿಗಳು ಮತ್ತು ಅಭಿಮಾನಿಗಳು ಈ ಸತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇದೇ ಸಭೆಯಲ್ಲಿ ಡಾ. ಎಂ. ಮೋಹನ ಆಳ್ವರ ಅಮೃತ ಮಹೋತ್ಸವವನ್ನು 2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

 ಕಾರ್ಯಕ್ರಮದ ಯಶಸ್ಸಿಗಾಗಿ ರಚಿಸಲಾದ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಯಿತು.

 ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಶಶಿಧರ ಶೆಟ್ಟಿ ಬರೋಡ ಮತ್ತು ಚಂದ್ರಹಾಸ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ 'ನಮ್ಮ ಕುಡ್ಲ' ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು ಆಯ್ಕೆಯಾದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ಡಿ. ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಜೆ. ಕೃಷ್ಣ ಪಾಲೇಮಾರ್, ಬಿ. ನಾಗರಾಜ ಶೆಟ್ಟಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಪ್ರಮುಖರಾದ ಎಂ.ಬಿ. ಪುರಾಣಿಕ್, ಶ್ರೀಪತಿ ಭಟ್, ಮೀನಾಕ್ಷಿ ಆಳ್ವ ಸೇರಿದಂತೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ