image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಗ್ರಾಮಸ್ಥರ ಸಮಾಲೋಚನಾ ಸಭೆ

ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಗ್ರಾಮಸ್ಥರ ಸಮಾಲೋಚನಾ ಸಭೆ

ಉಜಿರೆ: ಧರ್ಮಸ್ಥಳ ಗ್ರಾಮ ಮತ್ತು ದೇವಸ್ಥಾನದ ನಡುವೆ ಅವಿನಾಭಾವ ಸಂಬಂಧವಿದ್ದು, ಕ್ಷೇತ್ರದ ಪ್ರಗತಿ ಮತ್ತು ಸೇವಾ ಕಾರ್ಯಗಳನ್ನು ಸಹಿಸದೆ ಕೆಲವರು ಸುಳ್ಳು ವದಂತಿಗಳ ಮೂಲಕ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಆರೋಪಿಸಿದ್ದಾರೆ.

ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ನಾಗರಿಕರ ಸಮಾಲೋಚನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ, ಜೈನ, ಮುಸ್ಲಿಂ ಮತ್ತು ಕ್ರೈಸ್ತರು ಸೇರಿದಂತೆ ಸರ್ವಧರ್ಮೀಯರೂ ಭಕ್ತಿಯಿಂದ ನಡೆದುಕೊಳ್ಳುವ ಈ ಕ್ಷೇತ್ರದಲ್ಲಿ ಸದಾ ಶಾಂತಿ ಮತ್ತು ಕೋಮುಸೌಹಾರ್ದ ನೆಲೆಸಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಗಿರೀಶ್ ಮಟ್ಟಣ್ಣವರ್, ಮಹೇಶ್‌ ಶೆಟ್ಟಿ ತಿಮರೋಡಿ, ಜಯಂತ ಟಿ. ಹಾಗೂ ಅವರ ಸಂಗಡಿಗರು 2000ದಿಂದ 2014ರ ಅವಧಿಯಲ್ಲಿ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳು (ಯು.ಡಿ.ಆರ್) ಸಂಭವಿಸಿವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಕೂಡ ಇದೇ ಅಂಕಿಅಂಶವನ್ನು ಉಲ್ಲೇಖಿಸಿ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಪಡೆದ ದಾಖಲೆಗಳ ಪ್ರಕಾರ 2000ದಿಂದ 2014ರ ವರೆಗೆ ಧರ್ಮಸ್ಥಳ ಮತ್ತು ಸುತ್ತಮುತ್ತ ಸಂಭವಿಸಿರುವ ಅಸಹಜ ಸಾವುಗಳ ಸಂಖ್ಯೆ 374 ಮಾತ್ರ ಎಂದು ಅವರು ಸ್ಪಷ್ಟಪಡಿಸಿದರು.

81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ಜಿಲ್ಲೆಯ ಅತಿ ದೊಡ್ಡ ತಾಲ್ಲೂಕಾಗಿದ್ದು, ಹಿಂದೆ ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಪೊಲೀಸ್ ಠಾಣೆಯಿತ್ತು. ಇತ್ತೀಚೆಗಷ್ಟೇ ಪುಂಜಾಲಕಟ್ಟೆ, ವೇಣೂರು ಮತ್ತು ಧರ್ಮಸ್ಥಳದಲ್ಲಿ ಹೊಸ ಠಾಣೆಗಳು ಆರಂಭಗೊಂಡಿವೆ. ವಾಸ್ತವ ಹೀಗಿರುವಾಗ ವಿವಿಧ ಕಚೇರಿ, ಆಯೋಗ ಮತ್ತು ನ್ಯಾಯಾಲಯಗಳಿಗೆ ಸುಳ್ಳು ಮಾಹಿತಿ ನೀಡಿ ಕ್ಷೇತ್ರಕ್ಕೆ ಕಳಂಕ ತರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸ್ಥಳೀಯರ ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದ ಅವರು, ಈ ಕುರಿತು ಮುಖ್ಯಮಂತ್ರಿ, ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಪತ್ರ ರವಾನಿಸಲಾಗಿದೆ ಎಂದರು. ಸೂಕ್ತ ನ್ಯಾಯ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ವಕೀಲ ಕೇಶವ ಬೆಳಾಲು ಸೇರಿದಂತೆ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು.

Category
ಕರಾವಳಿ ತರಂಗಿಣಿ