ಮಂಗಳೂರು: ರಾಜ್ಯ ಸರ್ಕಾರವು ಮಳೆಹಾನಿ ದುರಸ್ತಿ ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಿರುವ ಸುಮಾರು 3 ಕೋಟಿ ರೂಪಾಯಿ ಅನುದಾನದ ಭಾಗವಾಗಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅತ್ತಾವರ ಗ್ರಾಮದ ಶಿವನಗರದಲ್ಲಿ 60 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿʼಸೋಜಾ ಅವರು ಸ್ಥಳೀಯ ನಾಗರಿಕರೊಂದಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವನಗರದ ಸಾರ್ವಜನಿಕ ತೋಡು ಮತ್ತು ರಾಜಕಾಲುವೆಯಲ್ಲಿ ಮಳೆನೀರು ಹಾಗೂ ಒಳಚರಂಡಿ ನೀರು ಸರಾಗವಾಗಿ ಹರಿಯದೆ ಉಂಟಾಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಮಳೆಗಾಲದಲ್ಲಿ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ರಾಜಕಾಲುವೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದರೊಂದಿಗೆ, ಶಿವನಗರದ ಯುವಕರ ವೇದಿಕೆಗೆ (ಸ್ಟೇಜ್) ಶಾಸಕರ ನಿಧಿಯಿಂದ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಆ ಕಾಮಗಾರಿಯೂ ಈಗಾಗಲೇ ಆರಂಭಗೊಂಡಿದೆ. ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಐವನ್ ಡಿʼಸೋಜಾ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಸದಾಶಿವ ಕುಲಾಲ್, ನರೇಶ್ ಶೆಟ್ಟಿ ಮಂಗಳಾದೇವಿ, ಬೂತ್ ಅಧ್ಯಕ್ಷ ಅಭಿಷೇಕ್, ಸ್ಥಳೀಯ ಮುಖಂಡರಾದ ದಿನೇಶ್ ಪಾಂಡೇಶ್ವರ, ನರೇಶ್, ಮೀನಾ, ಕಮಲ್ ಹಾಗೂ ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು.