ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಉಡುಪಿಯ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಭಾಗಿತ್ವದಲ್ಲಿ ನವೆಂಬರ್ 11 ರಿಂದ 13 ರವರೆಗೆ ನಡೆದ 46ನೇ ಮಂಗಳೂರು ವಿವಿ ಅಂತರ್ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ತಂಡವು 24ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕೂಟದಲ್ಲಿ ಪಾರಮ್ಯ ಮೆರೆದ ಆಳ್ವಾಸ್ ತಂಡವು ಪುರುಷರ ವಿಭಾಗದಲ್ಲಿ 274 ಹಾಗೂ ಮಹಿಳೆಯರ ವಿಭಾಗದಲ್ಲಿ 192 ಅಂಕಗಳೊಂದಿಗೆ ಒಟ್ಟು 466 ಅಂಕಗಳನ್ನು ಕಲೆಹಾಕಿತು. ಇದರಲ್ಲಿ 38 ಚಿನ್ನ ಹಾಗೂ 20 ಬೆಳ್ಳಿ ಸೇರಿದಂತೆ ಒಟ್ಟು 58 ಪದಕಗಳನ್ನು ಬಾಚಿಕೊಂಡು ಸಮಗ್ರ ತಂಡ ಪ್ರಶಸ್ತಿಗೆ ಭಾಜನವಾಯಿತು.
ಕ್ರೀಡಾಕೂಟದಲ್ಲಿ ಆಳ್ವಾಸ್ ಕ್ರೀಡಾಪಟುಗಳು ಎರಡು ನೂತನ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪುರುಷರ 200 ಮೀಟರ್ ಓಟದಲ್ಲಿ ಅಂಕಿತ್ ಜೋಗಿ ಹಾಗೂ 4x100 ಮೀಟರ್ ರಿಲೇ ತಂಡ ಹೊಸ ದಾಖಲೆ ಬರೆದಿದೆ. ಅಲ್ಲದೆ, ಪುರುಷರ 400 ಮೀಟರ್ ವಿಭಾಗದಲ್ಲಿ ಮನೀಶ್ ಮತ್ತು ಮಹಿಳೆಯರ 100 ಮೀಟರ್ ವಿಭಾಗದಲ್ಲಿ ವಿಭಾ ಶಂಕರ್ ಕುಮಾರ್ ಅವರು ಕೂಟದ 'ಬೆಸ್ಟ್ ಅಥ್ಲೀಟ್' ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಂಗಳೂರು ವಿವಿ ಅಂತರ್ ಕಾಲೇಜು ಅಥ್ಲೆಟಿಕ್ಸ್ನ ಒಟ್ಟು 47 ಸ್ಪರ್ಧೆಗಳ ಪೈಕಿ 46 ಕೂಟ ದಾಖಲೆಗಳು ಆಳ್ವಾಸ್ ಕ್ರೀಡಾಪಟುಗಳ ಹೆಸರಿನಲ್ಲಿರುವುದು ವಿಶೇಷ.
ಕ್ರೀಡಾಪಟುಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, "ಕ್ರೀಡಾಪಟುಗಳಿಗೆ ಅಗತ್ಯವಾದ ಮೂಲಸೌಕರ್ಯ, ಗುಣಮಟ್ಟದ ತರಬೇತಿ ಮತ್ತು ನಿರಂತರ ಪ್ರೋತ್ಸಾಹ ನೀಡಿದಾಗ ಉತ್ತಮ ಸಾಧನೆ ಸಾಧ್ಯ ಎಂಬುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ. ಸತತ 24ನೇ ಬಾರಿ ಸಮಗ್ರ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿಯಾಗಿದ್ದು, ವಿವಿಯ 46 ಕೂಟ ದಾಖಲೆಗಳು ನಮ್ಮ ಸಂಸ್ಥೆಯ ಹೆಸರಿನಲ್ಲಿರುವುದು ನಿರಂತರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ" ಎಂದು ತಿಳಿಸಿದ್ದಾರೆ.