image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಂತ್ರಜ್ಞಾನದ ಜೊತೆಗೆ ನೀರಿನ ಸಂರಕ್ಷಣೆಯೂ ಅತ್ಯಗತ್ಯ: ಡಾ. ಸೋಲೋಮನ್

ತಂತ್ರಜ್ಞಾನದ ಜೊತೆಗೆ ನೀರಿನ ಸಂರಕ್ಷಣೆಯೂ ಅತ್ಯಗತ್ಯ: ಡಾ. ಸೋಲೋಮನ್

ಮೂಡುಬಿದಿರೆ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಅದರ ಪರಿಸರದ ಮೇಲಿನ ಪರಿಣಾಮಗಳ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಿದೆ. ವಿಶೇಷವಾಗಿ ಎಐ ವ್ಯವಸ್ಥೆಗಳಿಗೆ ಅಗತ್ಯವಿರುವ ಬೃಹತ್ ಡೇಟಾ ಸೆಂಟರ್‌ಗಳ ನಿರ್ವಹಣೆ ಮತ್ತು ಸರ್ವರ್‌ಗಳನ್ನು ತಂಪಾಗಿಡಲು ಅಪಾರ ಪ್ರಮಾಣದ ವಿದ್ಯುತ್ ಹಾಗೂ ನೀರು ಬಳಕೆಯಾಗುತ್ತಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ ಎಂದು ಊಟಿಯ ಜಿಯೋದಾರ್ ಸಂಸ್ಥೆಯ ಸಿಇಒ ಹಾಗೂ ಮುಖ್ಯ ವಿಜ್ಞಾನಿ ಡಾ. ಸೋಲೋಮನ್ ವಿಮಲ್ ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನೀರಿನ ಸಂರಕ್ಷಣೆಯ ಅಗತ್ಯ’ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಡೇಟಾ ಸೆಂಟರ್‌ಗಳನ್ನು ನಿರ್ಮಿಸುವಾಗ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ನೀರಿನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಬೇಕು. ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ನೀರು ಬಳಕೆಯಾಗುತ್ತಿದ್ದು, ನೀರಿನ ಪೋಲನ್ನು ತಡೆಗಟ್ಟಿ ಹವಾಮಾನ ಮತ್ತು ಮಳೆಯ ಮಾಹಿತಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಜೀವನದ ಪ್ರತಿಯೊಂದು ಅನುಭವ ಮತ್ತು ಅವಕಾಶಗಳನ್ನು ಬಳಸಿಕೊಂಡು ಹೊಸ ವಿಷಯಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ರೋಸ್ಟ್ರಮ್ ವೇದಿಕೆಯ ಸಂಯೋಜಕಿ ಡಾ. ದೀಪಾ ಕೊಠಾರಿ ಹಾಗೂ ಆಳ್ವಾಸ್ ಕೃಷಿ ಕಾಲೇಜಿನ ಡೀನ್ ಡಾ. ವಾಸುದೇವನ್ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕ ಡಾ. ವಿನಯ ಭಾನು ಕಾರ್ಯಕ್ರಮ ನಿರೂಪಿಸಿ, ಇಂದಿರಾ ಕಾವ್ಯ ವಂದಿಸಿದರು.

Category
ಕರಾವಳಿ ತರಂಗಿಣಿ