ಮಂಗಳೂರು: 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ವತಿಯಿಂದ ಯಕ್ಷಗಾನ ಕಲಾಪೋಷಕರಿಗೆ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ'ಕ್ಕೆ ಮುಂಬಯಿಯ ಖ್ಯಾತ ಹೋಟೆಲ್ ಉದ್ಯಮಿ, ಸಮಾಜಸೇವಕ ಹಾಗೂ ಕಲಾಪೋಷಕ ವೇಣುಗೋಪಾಲ ಎಲ್. ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 22 ರಿಂದ 28ರ ವರೆಗೆ ಮಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ 'ಯಕ್ಷಗಾನ ತಾಳಮದ್ದಳೆ ಸಪ್ತಾಹ-2026'ರ ಹದಿನಾಲ್ಕನೇ ವರ್ಷದ ನುಡಿ ಹಬ್ಬದಲ್ಲಿ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗುವುದು.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಸಮೀಪದ ಕರಂಬಾರು ಪಡುಮನೆಯಲ್ಲಿ ಲಕ್ಕಪ್ಪ ಶೆಟ್ಟಿ ಕುಕ್ಕಾಜೆ ಮತ್ತು ಕೆಂಜಾರು ಪೆರ್ಲ ರತ್ನಾ ಶೆಟ್ಟಿ ದಂಪತಿಯ ಪುತ್ರನಾಗಿ 1964ರ ಜುಲೈ 24ರಂದು ಜನಿಸಿದ ವೇಣುಗೋಪಾಲ ಎಲ್. ಶೆಟ್ಟಿ ಅವರು, ಕರಂಬಾರು ಮತ್ತು ಬೊಂದೇಲ್ನಲ್ಲಿ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿ 1978ರಲ್ಲಿ ಮುಂಬಯಿಗೆ ತೆರಳಿದರು. ಥಾಣೆಯಲ್ಲಿ ಚಿಕ್ಕಪ್ಪನ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಲೇ ಘಾಟ್ಕೋಪರ್ನ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಹಾಗೂ ಸಿದ್ದಾರ್ಥ ಕಾಲೇಜಿನಲ್ಲಿ ರಾತ್ರಿ ಶಾಲೆ ಕಲಿತು ಬಿ.ಕಾಂ ಪದವಿ ಪಡೆದರು. ಬಳಿಕ ಆರು ತಿಂಗಳು ಸೌದಿ ಅರೇಬಿಯಾದಲ್ಲಿ ದುಡಿದು ಮರಳಿ, ಮುಂಬಯಿಯ ಭಾಂಡೂಪ್ನಲ್ಲಿ ಹೋಟೆಲ್ ಉದ್ಯಮವನ್ನು ಆರಂಭಿಸಿದರು. ಸತತ ಪರಿಶ್ರಮದಿಂದ ಉದ್ಯಮವನ್ನು ವಿಸ್ತರಿಸಿದ ಅವರು ಥಾಣೆ, ಭಿವಂಡಿ, ಕಲ್ಯಾಣ್ ಮಾತ್ರವಲ್ಲದೆ ಹುಟ್ಟೂರು ಮಂಗಳೂರಿನ ಸುರತ್ಕಲ್ ಮತ್ತು ದೇರಳಕಟ್ಟೆಗಳಲ್ಲೂ ಹೋಟೆಲ್ಗಳನ್ನು ಸ್ಥಾಪಿಸಿದ್ದಾರೆ. ಪ್ರಸ್ತುತ ಗುಜರಾತ್ನಲ್ಲೂ ಹಲವು ಕಂಪನಿಗಳ ಕ್ಯಾಂಟೀನ್ಗಳನ್ನು ನಡೆಸುತ್ತಿದ್ದು, ತಮ್ಮ 18 ಉದ್ಯಮ ಸಂಸ್ಥೆಗಳ ಮೂಲಕ 900ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ ನೂರಾರು ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ.
ಥಾಣೆ ಬಂಟ್ಸ್ ಅಸೋಸಿಯೇಶನ್ನಲ್ಲಿ 19 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 2019-2022ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು, ಪ್ರಸ್ತುತ ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರಾಗಿ, ಬಜಪೆ ಕರಂಬಾರು ಮಹಾಮಾಯಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಹಾಗೂ ಕರಂಬಾರು ಕೆಂಜಾರು ಶ್ರೀದೇವಿ ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾತಿ-ಮತ ಭೇದವಿಲ್ಲದೆ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಆರ್ಥಿಕವಾಗಿ ಹಿಂದುಳಿದ ಮಕ್ಕಳ ದತ್ತು ಸ್ವೀಕಾರ, ಬಡ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು, ನೂರಾರು ದೇವಸ್ಥಾನ-ದೈವಸ್ಥಾನಗಳ ಅಭಿವೃದ್ಧಿಗೆ ಧನಸಹಾಯ ಹಾಗೂ ಯಕ್ಷಗಾನ ಕಲಾವಿದರು ಮತ್ತು ಕಲಾ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇವರ ಸಮಾಜಸೇವೆಯನ್ನು ಗುರುತಿಸಿ 2019ರಲ್ಲಿ ಕೇಂದ್ರ ಸಚಿವಾಲಯದಿಂದ 'ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ' ಸೇರಿದಂತೆ ಹಲವಾರು ಗೌರವಗಳು ಸಂದಿವೆ. ಪತ್ನಿ ಶಿಲ್ಪಾ ವಿ. ಶೆಟ್ಟಿ, ಅವಳಿ ಪುತ್ರಿಯರಾದ ಆರ್ಕಿಟೆಕ್ಟ್ ವಿಭಾ ವಿ. ಶೆಟ್ಟಿ (ಅಳಿಯ ರಾಕೇಶ್ ಶೆಟ್ಟಿ), ಡಾ. ವೀಕ್ಷಾ ವಿ. ಶೆಟ್ಟಿ (ಅಳಿಯ ಡಾ. ಮಂಜುನಾಥ್) ಹಾಗೂ ಪುತ್ರಿ ವೈಷ್ಣವಿ ಶೆಟ್ಟಿ ಅವರನ್ನೊಳಗೊಂಡ ಸಂತೃಪ್ತ ಕುಟುಂಬ ಇವರದ್ದಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ಸಹಯೋಗದಲ್ಲಿ ನವೆಂಬರ್ 22ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಲ್. ಧರ್ಮ ಅವರು ಸಪ್ತಾಹವನ್ನು ಉದ್ಘಾಟಿಸಲಿದ್ದು, ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇದಿಕೆಯಲ್ಲಿ ನಿವೃತ್ತ ಭಾರತೀಯ ಸೇನಾನಿ ಕ್ಯಾಪ್ಟನ್ ಶರತ್ ಭಂಡಾರಿ ಅವರು ವೇಣುಗೋಪಾಲ ಎಲ್. ಶೆಟ್ಟಿ ಅವರಿಗೆ 2026ನೇ ಸಾಲಿನ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ನೀಡಿ ಗೌರವಿಸಲಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಅಪರಾಹ್ನ 2:00 ಗಂಟೆಗೆ ತೋರಣ ನಾಂದಿಯಾಗಿ ಹಿರಿಯ ಉದ್ಯಮಿ, ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ ಅವರ ದೀಪ ಪ್ರಜ್ವಲನೆಯೊಂದಿಗೆ ಬಾಯಾರು ಸಂಕಯ್ಯ ಭಾಗವತ ವಿರಚಿತ 'ತುಳು ಪಂಚವಟಿ' ಪ್ರಸಂಗದ 'ಬಂಗಾರ್ದ ಉರೆ' ತುಳು ತಾಳಮದ್ದಳೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಬಳಿಕ ಸಪ್ತಾಹದ ಮೊದಲ ದಿನದ ಪ್ರಸಂಗವಾಗಿ 'ಚಂದ್ರ ವಂಶೋದಯ' ಯಕ್ಷಗಾನ ತಾಳಮದ್ದಳೆ ಜರುಗಲಿದೆ ಎಂದು ಯಕ್ಷಾಂಗಣದ ಪ್ರಕಟಣೆ ತಿಳಿಸಿದೆ.