ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಡೊಳ್ಳು ದೀಪಾವಳಿ’ ಕಾರ್ಯಕ್ರಮದಲ್ಲಿ ಚಿಂತಕ ಮುನಿರಾಜ್ ರೆಂಜಾಳ ಅವರು ದೀಪಾವಳಿ ಸಂದೇಶ ನೀಡಿದರು. ದೀಪಾವಳಿಯು ಕೇವಲ ಸಂಭ್ರಮದ ಹಬ್ಬವಲ್ಲದೆ ಜ್ಞಾನ, ತಿಳುವಳಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳಗಿಸುವ ಪವಿತ್ರ ಆಚರಣೆಯಾಗಿದೆ ಎಂದು ಅವರು ಹೇಳಿದರು. ಹಣತೆಯು ಅಜ್ಞಾನವನ್ನು ದೂರಮಾಡಿ ಜ್ಞಾನದ ಬೆಳಕನ್ನು ಹರಡುವ ಸಂಕೇತವಾಗಿದ್ದು, ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ ಮತ್ತು ಏಕತೆಯನ್ನು ಬೆಳೆಸುವ ಮೂಲಕ ಪ್ರತಿಯೊಬ್ಬರ ಬದುಕು ಇತರರಿಗೂ ಬೆಳಕಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಹಬ್ಬದ ದಿನಗಳಲ್ಲಿ ಮನೆಗೆ ತೆರಳಲು ಸಾಧ್ಯವಾಗದ ಹೊರರಾಜ್ಯ ಹಾಗೂ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಹಬ್ಬದ ಸಂತಸ ಮತ್ತು ಆತ್ಮೀಯತೆಯನ್ನು ತುಂಬುವ ಉದ್ದೇಶದಿಂದ ಈ ಆಚರಣೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಗೋಪೂಜೆ, ಬಲೀಂದ್ರ ಪೂಜೆ, ಕೃಷಿ ಉಪಕರಣಗಳ ಪೂಜೆ, ತುಳಸಿ ಪೂಜೆ ಹಾಗೂ ಡೊಳ್ಳು ಪೂಜೆಯೊಂದಿಗೆ ಕಾರ್ಯಕ್ರಮ ನೆರವೇರಿತು. ಮಂಗಳೂರಿನ ಇಸ್ಕಾನ್ ತಂಡ ಹಾಗೂ ವಿವಿಧ ಸ್ಥಳೀಯ ಭಜನಾ ಮಂಡಳಿಗಳಿಂದ ಜರುಗಿದ ಭಕ್ತಿಗೀತೆ ಮತ್ತು ಕುಣಿತ ಭಜನೆಗಳು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದವು. ಸಮಾರಂಭದಲ್ಲಿ ಉದ್ಯಮಿ ಕೆ. ಶ್ರೀಪತಿ ಭಟ್, ಸಂಸ್ಥೆಯ ಪ್ರಮುಖರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.