image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ನೂತನ ಆಡಳಿತ ಮಂಡಳಿ ಕಟ್ಟಡಕ್ಕೆ ಶಂಕುಸ್ಥಾಪನೆ

ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ನೂತನ ಆಡಳಿತ ಮಂಡಳಿ ಕಟ್ಟಡಕ್ಕೆ ಶಂಕುಸ್ಥಾಪನೆ

ಮಂಗಳೂರು : ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯು (FMCI) ತನ್ನ ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ನೂತನ ಆಡಳಿತ ಮಂಡಳಿ ಕಟ್ಟಡ ನಿರ್ಮಾಣಕ್ಕೆ ನವೆಂಬರ್ 7, 2026 ಶನಿವಾರದಂದು ಸಂಜೆ ಶಂಕುಸ್ಥಾಪನೆ ನೆರವೇರಿಸಿತು.

ಸಂಸ್ಥೆಯ ಸೇಂಟ್ ಜೋಸೆಫ್ ಚಾಪೆಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಿಷಪ್ ವಂ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಅವರ ಮುಖ್ಯ ಸಾನ್ನಿಧ್ಯದಲ್ಲಿ ದಿವ್ಯ ಬಲಿಪೂಜೆ ನೆರವೇರಿತು. ತದನಂತರ ಹೊಸ ಕಟ್ಟಡ ನಿರ್ಮಾಣದ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಆಶೀರ್ವದಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎನ್‌ಆರ್‌ಐ ಉದ್ಯಮಿ ಮೈಕಲ್ ಡಿಸೋಜ ಅವರು ಮುಖ್ಯ ಅತಿಥಿಯಾಗಿ ತಮ್ಮ ಧರ್ಮಪತ್ನಿ ಫ್ಲೇವಿಯಾ ಡಿಸೋಜ ಹಾಗೂ ಪುತ್ರ ಆಡ್ರಿಯನ್ ಡಿಸೋಜ ಅವರೊಂದಿಗೆ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ವಂ| ಫಾಸ್ಟಿನ್ ಲೂಕಾಸ್ ಲೋಬೊ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ವಂ| ಡಾ| ಮೈಕಲ್ ಸಾಂತುಮಾಯೋರ್ ಕಾರ್ಯಕ್ರಮವನ್ನು ಸಂಘಟಿಸಿದರು.

ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್ ಅಸೋಸಿಯೇಟ್ಸ್‌ನ ಎಂಜಿನಿಯರ್ ಸನಾಥ್ ಶೆಟ್ಟಿ ಅವರು ವಿನ್ಯಾಸಗೊಳಿಸಿದ ಪರಿಸರ ಸ್ನೇಹಿ ಹಾಗೂ ಸೌರಶಕ್ತಿ ಆಧಾರಿತ ನೂತನ ಕಟ್ಟಡದ ನೀಲನಕ್ಷೆಯನ್ನು ಮೈಕಲ್ ಡಿಸೋಜ ಅವರು ಅನಾವರಣಗೊಳಿಸಿದರು. ನೂತನ ಯೋಜನೆಗೆ ನೀಡಿದ ಔದಾರ್ಯ ಮತ್ತು ಬೆಂಬಲಕ್ಕಾಗಿ ಮೈಕಲ್ ಡಿಸೋಜ ಅವರ ಕುಟುಂಬವನ್ನು ಶಾಲುವ ಹೊದಿಸಿ, ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈಕಲ್ ಡಿಸೋಜ ಅವರು, ಸಮಾಜ ಸೇವೆಯ ಮಹತ್ವವನ್ನು ಸ್ಮರಿಸುತ್ತಾ ತಮ್ಮ ಉದ್ಯಮ ಪಯಣಕ್ಕೆ ತಾಯಿಯಿಂದ ಪಡೆದ 21,500 ರೂಪಾಯಿ ಸಾಲವೇ ಮೂಲ ಬಂಡವಾಳವಾಗಿತ್ತು ಎಂಬುದನ್ನು ಹಂಚಿಕೊಂಡರು. ಅಧ್ಯಕ್ಷೀಯ ಭಾಷಣ ಮಾಡಿದ ಬಿಷಪ್ ಪೀಟರ್ ಪೌಲ್ ಸಲ್ಡಾನ್ಹಾ ಅವರು, ಮೈಕಲ್ ಡಿಸೋಜ ಕುಟುಂಬದ ನಿಸ್ಸ್ವಾರ್ಥ ಕೊಡುಗೆಗಳು ಮತ್ತು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನೆರವೇರಿದವು. ಸುಮಾರು 1,750ಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಈ ಸಮಾರಂಭವು ಪ್ರೀತಿಭೋಜನದೊಂದಿಗೆ ಮುಕ್ತಾಯಗೊಂಡಿತು.

Category
ಕರಾವಳಿ ತರಂಗಿಣಿ