ಮೂಡಬಿದಿರೆ : ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಎತ್ತಿಹಿಡಿದ ಯುವಪಡೆ, ಸಸಿಹಿತ್ಲು ಮುಂಡಾ ಬೀಚ್ನ ದ್ವಾರದಲ್ಲಿ ಭಾನುವಾರ ಬೃಹತ್ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸ್ಥಳೀಯ ಸಂಘ–ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ಮೂಡಿಬಂದಿದೆ.
ಸ್ವಚ್ಛತಾ ಕಾರ್ಯಕ್ರಮದ ಮೂಲಕ 140 ಬ್ಯಾಗ್ಗಳಷ್ಟು ಹಾಗೂ ಒಟ್ಟು 3 ಕ್ವಿಂಟಾಲ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಈ ಅಭಿಯಾನದಲ್ಲಿ ಯುವಕ–ಯುವತಿಯರ ಮಂಡಲ ಹಳೆಯಂಗಡಿ, ವಿದ್ಯಾವಿನಾಯಕ ಯುವಕ ಮಂಡಲ ಹಾಗೂ ಸಸಿಹಿತ್ಲು ಯುವಕ ಮಂಡಲದ ನೂರಾರು ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಶ್ರಮದಾನ ಮಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಕರಾವಳಿ ನದಿಗಳ ಮೂಲಕ ಸಮುದ್ರವನ್ನು ಸೇರುವ ಪ್ಲಾಸ್ಟಿಕ್ ಸೇರಿದಂತೆ ಇತರ ಕಸವನ್ನು ಮೂಲದಲ್ಲಿಯೇ ತಡೆಯಲು 'ಹಸಿರು ಸಂವಾದ' ಅಭಿಯಾನವನ್ನು ರೂಪಿಸಲಾಗಿದೆ ಎಂದರು. ಸಾರ್ವಜನಿಕ ಸ್ಥಳಗಳು ಹಾಗೂ ಕಡಲತೀರಗಳನ್ನು ಸ್ವಂತ ಆಸ್ತಿಯೆಂದು ಭಾವಿಸಿ ರಕ್ಷಿಸಬೇಕು. ಸ್ವಚ್ಛತೆಯು ಕೇವಲ 1 ದಿನಕ್ಕೆ ಸೀಮಿತವಾಗದೆ ನಿರಂತರ ಜವಾಬ್ದಾರಿಯಾಗಬೇಕು ಎಂದು ಅವರು ಪ್ರತಿಪಾದಿಸಿದರು. ಈಗಾಗಲೇ ಹಸಿರು ಗಣೇಶೋತ್ಸವ ಮತ್ತು ಹಸಿರು ನಾಗರ ಪಂಚಮಿಯಂತಹ ಪರಿಸರ ಸ್ನೇಹಿ ಆಚರಣೆಗಳನ್ನು ಪ್ರೋತ್ಸಾಹಿಸಲಾಗಿದ್ದು, ಈ ದೀಪಾವಳಿಯನ್ನೂ ಪರಿಸರ ರಕ್ಷಣೆಯ ಕೊಡುಗೆಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಮಾತನಾಡಿ, ಸ್ವಚ್ಛ ವಾತಾವರಣ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿಯು ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಿರಂತರವಾಗಿ ಇಂತಹ ಜಾಗೃತಿ ಚಳವಳಿಗಳನ್ನು ನಡೆಸಲು ಬದ್ಧವಾಗಿದೆ ಎಂದು ತಿಳಿಸಿದರು. ಶ್ರಮದಾನದಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರಿಗೆ ಭಗವತಿ ದೇವಸ್ಥಾನದ ವತಿಯಿಂದ ಫಲಹಾರ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.