ಉಜಿರೆ : ಉಜಿರೆಯ ರುಡ್ಸೆಟ್ ಸಂಸ್ಥೆಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ (MoRD) ಗ್ರಾಮೀಣ ಕೌಶಲ್ಯ ವಿಭಾಗದ ಅಧಿಕಾರಿಗಳಾದ ಶ್ರೀ ಆಶೀಶ್ ಸಿನ್ಹಾ ಹಾಗೂ ಶ್ರೀ ಅಬು ಓ.ಎಸ್. ಅವರು ಇತ್ತೀಚೆಗೆ ಭೇಟಿ ನೀಡಿದರು.
ತಮ್ಮ ಭೇಟಿಯ ವೇಳೆ ಸಂಸ್ಥೆಯ ಸಂಪೂರ್ಣ ಆವರಣ, ತರಬೇತಿ ವಿಭಾಗಗಳು ಮತ್ತು ಮೆಸ್ ಬ್ಲಾಕ್ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ರುಡ್ಸೆಟ್ನ ಹಿನ್ನೆಲೆ, ಉದ್ದೇಶ, ತರಬೇತಿ ಚಟುವಟಿಕೆಗಳು ಹಾಗೂ ಗ್ರಾಮೀಣ ಯುವಜನರಲ್ಲಿ ಸ್ವ-ಉದ್ಯೋಗ ಉತ್ತೇಜಿಸುವಲ್ಲಿ ಸಂಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ವಿವರಣೆ ನೀಡಿದರು. ಸಂಸ್ಥೆಯ ಸಮರ್ಪಿತ ಪ್ರಯತ್ನಗಳು ಮತ್ತು ಸಾಧನೆಗಳಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ನಡೆದ ಮಹಿಳಾ ಟೈಲರಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಧಿಕಾರಿಗಳು, ಶಿಬಿರಾರ್ಥಿಗಳಿಗೆ ಕೌಶಲಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗುವಂತೆ ಪ್ರೋತ್ಸಾಹಿಸಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ರುಡ್ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ, ನಿರ್ದೇಶಕ ಸುನೀಲ್ ಜಿ. ನಾಯ್ಕೆ, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಕೆ. ಕರುಣಾಕರ ಜೈನ್, ಶ್ರೀಮತಿ ಅನೂಸಯ ರೈ, ಲೋಹಿತ್ ಜೈನ್, ಅತಿಥಿ ಉಪನ್ಯಾಸಕಿ ಶ್ರೀಮತಿ ರಶ್ಮಿ ರಾಘವೇಂದ್ರ ಹಾಗೂ ಕಚೇರಿ ಸಹಾಯಕರು ಉಪಸ್ಥಿತರಿದ್ದರು.