image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಗುಡ್ಡಗಾಡು ಓಟ: ಮಂಗಳೂರು ವಿವಿಗೆ ಸಮಗ್ರ ಚಾಂಪಿಯನ್ಸ್ ಪ್ರಶಸ್ತಿ

ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಗುಡ್ಡಗಾಡು ಓಟ: ಮಂಗಳೂರು ವಿವಿಗೆ ಸಮಗ್ರ ಚಾಂಪಿಯನ್ಸ್ ಪ್ರಶಸ್ತಿ

ಉಡುಪಿ : ಉಡುಪಿಯ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಎರಡು ವಿಭಾಗಗಳಲ್ಲೂ ಭರ್ಜರಿ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ 12 ಕ್ರೀಡಾಪಟುಗಳೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಸಂಸ್ಥೆಗೆ ಮತ್ತು ವಿಶ್ವವಿದ್ಯಾನಿಲಯಕ್ಕೆ ಹೆಮ್ಮೆ ತಂದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಒಟ್ಟು 31 ಅಂಕಗಳನ್ನು ಪಡೆಯುವ ಮೂಲಕ ಸತತ ಐದನೇ ಬಾರಿಗೆ ತಂಡ ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಳ್ವಾಸ್‌ನ ಯಾಶಿ ಸಾಚನ್ 5ನೇ, ಆರತಿ 7ನೇ, ಲಕ್ಷ್ಮೀ 8ನೇ ಹಾಗೂ ಭಾಗೀರಥಿ 11ನೇ ಸ್ಥಾನ ಪಡೆಯುವ ಮೂಲಕ ತಂಡದ ಐತಿಹಾಸಿಕ ಜಯಕ್ಕೆ ಪ್ರಮುಖ ಕೊಡುಗೆ ನೀಡಿದರು.

ಇನ್ನೊಂದೆಡೆ ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳನ್ನು ಒಳಗೊಂಡ ಮಂಗಳೂರು ವಿವಿ ತಂಡವು 72 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆಯಿತು. ಅಂತಿಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳ ಒಟ್ಟು 103 ಅಂಕಗಳೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಕೂಟದ ಸಮಗ್ರ ಚಾಂಪಿಯನ್ಸ್ ಪಟ್ಟಕ್ಕೇರಿತು.

ಈ ಮಹತ್ವದ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, "ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಎಲ್ಲಾ 12 ಕ್ರೀಡಾಪಟುಗಳು ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ನಮಗೆ ಅಪಾರ ಹೆಮ್ಮೆಯ ವಿಷಯ. ಮಹಿಳಾ ತಂಡವು ಸತತ ಐದನೇ ಬಾರಿಗೆ ಪ್ರಶಸ್ತಿ ಗಳಿಸಿರುವುದು ಹಾಗೂ ಎರಡೂ ವಿಭಾಗ ಸೇರಿ ಸಮಗ್ರ ಚಾಂಪಿಯನ್ ಪಟ್ಟ ಪಡೆದಿರುವುದು ಸಂಸ್ಥೆಯ ನಿರಂತರ ಕ್ರೀಡಾ ತರಬೇತಿ ಮತ್ತು ಪ್ರೋತ್ಸಾಹಕ್ಕೆ ಸಿಕ್ಕ ಪ್ರತಿಫಲವಾಗಿದೆ. ಈ ಯುವ ಸಾಧಕರು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಇನ್ನಷ್ಟು ಕೀರ್ತಿ ತರಲಿ," ಎಂದು ಶುಭ ಹಾರೈಸಿದರು.

Category
ಕರಾವಳಿ ತರಂಗಿಣಿ