ಮಂಗಳೂರು: ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ MY Bharat - ದಕ್ಷಿಣ ಕನ್ನಡ, ಮಂಗಳೂರು ವಿಶ್ವವಿದ್ಯಾಲಯ, ಬೇಸೆಂಟ್ ಮಹಿಳಾ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ (NSS) ಇವುಗಳ ಸಂಯುಕ್ತ ಆಶ್ರಯದಲ್ಲಿ ಬೇಸೆಂಟ್ ಮಹಿಳಾ ಕಾಲೇಜಿನಲ್ಲಿ ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್ 2027 ಇದರ ಅಂಗವಾಗಿ ‘ಯೂತ್ ಪಾರ್ಲಿಮೆಂಟ್ 2027 - Lead the Path to Viksit Bharat’ ಕಾರ್ಯಕ್ರಮವು ಅತ್ಯಂತ ವೈಭವ ಹಾಗೂ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉದ್ಘಾಟಿಸಿ ಮಾತನಾಡಿದರು. 2047ರ ವೇಳೆಗೆ ಭಾರತವನ್ನು ಸಂಪೂರ್ಣ ವಿಕಸಿತ ರಾಷ್ಟ್ರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ದೇಶದ ಯುವಶಕ್ತಿಯ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಯುವಜನರು ಕೇವಲ ಸಮಾಜದ ಪ್ರೇಕ್ಷಕರಾಗಿ ಉಳಿಯದೆ, ದೇಶದ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ದಕ್ಷ ನಾಯಕರಾಗಬೇಕು ಎಂದು ಅವರು ಕರೆ ನೀಡಿದರು. ಅಲ್ಲದೆ, ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಿಂದ ಆರಂಭಿಸಿ ರಾಷ್ಟ್ರ ಮಟ್ಟದವರೆಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಸ್ಪೂರ್ತಿದಾಯಕವಾಗಿ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಿಮೆನ್ಸ್ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷರಾದ ಜೀವನ್ದಾಸ್ ನಾರಾಯಣ್ ವಹಿಸಿದ್ದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಎಷ್ಟು ಅಗತ್ಯ ಎಂಬುದನ್ನು ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿಕೊಟ್ಟರು.
ಈ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿ'ಸೋಜಾ, ಮೈ ಭಾರತ್ ಸಂಸ್ಥೆಯ ಉಪ ನಿರ್ದೇಶಕರಾದ ಉಲ್ಲಾಸ್ ಕೆ.ಟಿ., ಮಂಗಳೂರು ವಿಶ್ವವಿದ್ಯಾಲಯದ NSS ಕಾರ್ಯಕ್ರಮ ಸಂಯೋಜಕರಾದ ಡಾ. ಶೇಷಪ್ಪ ಕೆ. ಅಮಿನ್ ಹಾಗೂ ಜಗದೀಶ್ ಕೆ. ಅವರು ಗೌರವಾನ್ವಿತ ಉಪಸ್ಥಿತಿಯನ್ನು ವಹಿಸಿದ್ದರು. ಬೇಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಪರಶುರಾಮ್ ಜಿ. ಮಾಲಗಿ ಅವರು ಕಾರ್ಯಕ್ರಮಕ್ಕೆ ಶುಭನುಡಿಗಳನ್ನಾಡಿದರು.
ಇಡೀ ದಿನದ ಪ್ರಮುಖ ಆಕರ್ಷಣೆಯಾಗಿ ‘ಯೂತ್ ಪಾರ್ಲಿಮೆಂಟ್ ಅಧಿವೇಶನ’ ಮೂಡಿಬಂದಿತು. ಯುವ ಪ್ರತಿನಿಧಿಗಳು ಭಾರತೀಯ ಸಂಸತ್ತಿನ ಮಾದರಿಯಲ್ಲಿಯೇ ಆಡಳಿತ ಮತ್ತು ವಿರೋಧ ಪಕ್ಷಗಳಾಗಿ ರೂಪುಗೊಂಡು ತಮ್ಮ ನವೀನ ವಿಚಾರಗಳನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ವಿಕಸಿತ ಭಾರತ, ಯುವ ನಾಯಕತ್ವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಭಾಗವಹಿಸುವಿಕೆ ಹಾಗೂ ಮುಖ್ಯವಾಗಿ 'ಒಂದು ರಾಷ್ಟ್ರ, ಒಂದು ಚುನಾವಣೆ' (One Nation, One Election) ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರೌಢಿಮೆಯನ್ನು ಮೆರೆದರು.