ಪುತ್ತೂರು ತಾಲೂಕಿನ ಕೇಪು ಗ್ರಾಮದ ಶ್ರೀ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ನಡೆದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಇತರ 26 ಮಂದಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಲಭಿಸಿದೆ. ಶಾಸಕರು ಸೇರಿದಂತೆ ಎಲ್ಲ 26 ಜನರ ಮೇಲಿನ ಪ್ರಕರಣವನ್ನು ಉಚ್ಚ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
2025 ರ ಡಿಸೆಂಬರ್ 20 ರಂದು ಕೇಪು ಗ್ರಾಮದ ಉಳ್ಳಾಲ್ತಿ ದೇವಸ್ಥಾನದ ಆವರಣದಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವ ಮತ್ತು ಜಾತ್ರೆಯ ಅಂಗವಾಗಿ ಹರಕೆ ರೂಪದಲ್ಲಿ ಕೋಳಿ ಅಂಕ ಆಯೋಜಿಸಲಾಗಿತ್ತು. ಆದರೆ, ಈ ಕೋಳಿ ಅಂಕಕ್ಕೆ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಕ್ಷೇತ್ರ ಆಚಾರ-ವಿಚಾರ ಮತ್ತು ಸ್ಥಳೀಯರ ನಂಬಿಕೆಯಂತೆ ಹರಕೆಯ ಕೋಳಿ ಅಂಕವನ್ನು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವ ಹಾಗೂ ಮುಂದಾಳುತ್ವದಲ್ಲಿ ಮುಂದುವರಿಸಲಾಗಿತ್ತು.
ಪೊಲೀಸ್ ಇಲಾಖೆಯ ನಿರ್ಬಂಧ ಹಾಗೂ ಅನುಮತಿ ಇಲ್ಲದೆ ಕೋಳಿ ಅಂಕ ನಡೆಸಲಾಗಿದೆ ಎಂಬ ಕಾರಣಕ್ಕೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿ, ಶಾಸಕ ಅಶೋಕ್ ರೈ ಸೇರಿದಂತೆ ಒಟ್ಟು 26 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದ ಕಾನೂನು ಹೋರಾಟವನ್ನು ಕೈಗೆತ್ತಿಕೊಂಡಿದ್ದ ಆರೋಪಿಗಳ ಪರ ವಕೀಲರು, ಇದು ದೇವಸ್ಥಾನದ ಧಾರ್ಮಿಕ ವಿಧಿವಿಧಾನ ಹಾಗೂ ಸಾಂಪ್ರದಾಯಿಕ ಹರಕೆಯ ಭಾಗವಾಗಿದ್ದು, ಯಾವುದೇ ಜೂಜು ಅಥವಾ ಕಾನೂನುಬಾಹಿರ ಉದ್ದೇಶದಿಂದ ನಡೆದಿದ್ದಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕರ್ನಾಟಕ ಉಚ್ಛ ನ್ಯಾಯಾಲಯವು ಎಲ್ಲಾ ವಾದ-ಪ್ರತಿವಾದಗಳನ್ನು ಪರಿಶೀಲಿಸಿ, ಶಾಸಕ ಅಶೋಕ್ ರೈ ಹಾಗೂ ಇತರ 26 ಮಂದಿಯ ಮೇಲಿದ್ದ ಪ್ರಕರಣವನ್ನು ರದ್ದುಗೊಳಿಸಿ ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.