image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಉದ್ಘಾಟನೆ

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಉದ್ಘಾಟನೆ

ಬೆಂಗಳೂರು/ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೋರೇಶನ್ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯ ಸ್ಯಾಂಕಿ ರಸ್ತೆ ಕ್ರಾಸ್‌ನಲ್ಲಿರುವ ದಿ ಕನ್ನಿಂಗ್‌ಹ್ಯಾಮ್ ಕಮರ್ಷಿಯಲ್‌ನ ಮೊದಲ ಮಹಡಿಯಲ್ಲಿ ತನ್ನ ನೂತನ ಕಚೇರಿಯನ್ನು ಆರಂಭಿಸುವ ಮೂಲಕ ರಾಜಧಾನಿಗೆ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದ್ದು, ಈ ಕಚೇರಿಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರವು ದೇಶದಲ್ಲೇ ಪ್ರಮುಖ ಉದ್ಯಮ ಮತ್ತು ಹೂಡಿಕೆ ಕೇಂದ್ರವಾಗಿ ಬೆಳೆಯುತ್ತಿದ್ದು, ವಿವಿಧ ಕ್ಷೇತ್ರಗಳ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಅಪಾರ ಅವಕಾಶಗಳನ್ನು ನೀಡುತ್ತಿದೆ ಎಂದರು. ಇಂತಹ ಬೆಳವಣಿಗೆಯ ಸಮಯದಲ್ಲಿ ರೋಹನ್ ಕಾರ್ಪೋರೇಶನ್ ಬೆಂಗಳೂರು ಮಾರುಕಟ್ಟೆಗೆ ಪ್ರವೇಶಿಸಿರುವುದು ಅತ್ಯಂತ ಸ್ವಾಗತಾರ್ಹ ಹೆಜ್ಜೆಯಾಗಿದ್ದು, ಸಂಸ್ಥೆಯ ಮುಂದಿನ ಎಲ್ಲಾ ಯೋಜನೆಗಳಿಗೆ ಅವರು ಶುಭ ಹಾರೈಸಿದರು.

ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೊ ಮಾತನಾಡಿ, ಬೆಂಗಳೂರಿನಲ್ಲಿ ಕಚೇರಿ ಪ್ರಾರಂಬಿಸಿರುವುದು ರೋಹನ್ ಕಾರ್ಪೋರೇಶನ್‌ನ ಮೂರು ದಶಕಗಳ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದರು. ಇಲ್ಲಿನ ಗ್ರಾಹಕರಿಗೆ ಸಂಸ್ಥೆಯ ಗುಣಮಟ್ಟದ ಯೋಜನೆಗಳನ್ನು ಪರಿಚಯಿಸುವುದು, ಅವರೊಂದಿಗೆ ವಿಶ್ವಾಸಪೂರ್ಣ ಸಂಬಂಧವನ್ನು ಗಟ್ಟಿಗೊಳಿಸುವುದು ಮತ್ತು ನೂತನ ಅವಕಾಶಗಳನ್ನು ಸೃಷ್ಟಿಸುವುದು ತಮ್ಮ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಸಂಸ್ಥೆಯ ನಿರ್ದೇಶಕ ಡಿಯಾನ್ ಮೊಂತೆರೊ ಅವರು ಮಾತನಾಡಿ, ರಾಜಧಾನಿಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮನೆ ಖರೀದಿದಾರರ ನಿರೀಕ್ಷೆಗಳು ಹಾಗೂ ಜೀವನಶೈಲಿಯ ಅಗತ್ಯಗಳು ನಿರಂತರವಾಗಿ ಬದಲಾಗುತ್ತಿವೆ. ಈ ಆಧುನಿಕ ಬದಲಾವಣೆಗಳಿಗೆ ತಕ್ಕಂತೆ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಅತ್ಯುತ್ತಮ ವಸತಿ ಯೋಜನೆಗಳನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದು ವಿವರಿಸಿದರು.

ಈ ಕಾರ್ಯಾಚರಣೆಯ ಪ್ರಮುಖ ಭಾಗವಾಗಿ, ನವೆಂಬರ್ 6ರಿಂದ 8ರವರೆಗೆ ಮೂರು ದಿನಗಳ ಕಾಲ ಬೃಹತ್ ಪ್ರಾಜೆಕ್ಟ್ ಎಕ್ಸಿಬಿಷನ್ ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಗ್ರಾಹಕರು ರೋಹನ್ ಕಾರ್ಪೋರೇಶನ್‌ನ ವಿವಿಧ ವಸತಿ ಮತ್ತು ವಾಣಿಜ್ಯ ಯೋಜನೆಗಳ ವಿವರಗಳನ್ನು ನೇರವಾಗಿ ಪಡೆದುಕೊಳ್ಳಬಹುದು. ಅಲ್ಲದೆ, ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಆಯ್ದ ಮನೆ ಹಾಗೂ ಆಸ್ತಿಗಳನ್ನು ವಿಶೇಷ ಉತ್ತೇಜಕ ದರಗಳಲ್ಲಿ ಖರೀದಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.

1994ರಿಂದಲೂ ರಿಯಲ್ ಎಸ್ಟೇಟ್ ರಂಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ರೋಹನ್ ಕಾರ್ಪೋರೇಶನ್, ತನ್ನ ಮೂರು ದಶಕಗಳಿಗಿಂತಲೂ ಹೆಚ್ಚಿನ ಅನುಭವ, ಗುಣಮಟ್ಟ ಹಾಗೂ ಗ್ರಾಹಕರ ನಂಬಿಕೆಯೊಂದಿಗೆ ಇದೀಗ ಬೆಂಗಳೂರಿನ ಮಾರುಕಟ್ಟೆಯಲ್ಲೂ ಹೊಸ ಛಾಪು ಮೂಡಿಸಲು ಸಜ್ಜಾಗಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಮಹಾಧರ್ಮಪ್ರಾಂತ್ಯದ ಸಹಾಯಕ ಬಿಷಪ್ ಡಾ. ಜೋಸೆಫ್ ಸುಸೈನಾಥನ್ ಸೇರಿದಂತೆ ಹಲವು ರಾಜಕೀಯ ಹಾಗೂ ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನಿರೂಪಕಿ ರೀನಾ ಡಿಸೋಜಾ ನಡೆಸಿಕೊಟ್ಟರು.

Category
ಕರಾವಳಿ ತರಂಗಿಣಿ