image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ್ಯೂ ಮಂಗಳೂರು ಬಂದರಿನಲ್ಲಿ ಕಂಟೇನರ್ ಹಡಗು ಶುಲ್ಕಕ್ಕೆ ಶೇ. 50ರವರೆಗೆ ರಿಯಾಯಿತಿ

ನ್ಯೂ ಮಂಗಳೂರು ಬಂದರಿನಲ್ಲಿ ಕಂಟೇನರ್ ಹಡಗು ಶುಲ್ಕಕ್ಕೆ ಶೇ. 50ರವರೆಗೆ ರಿಯಾಯಿತಿ

ಮಂಗಳೂರು: ಕಂಟೇನರ್ ಸರಕು ಸಾಗಣೆಯನ್ನು ಉತ್ತೇಜಿಸುವ ಹಾಗೂ ಬಂದರಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಫೀಡರ್ ಮತ್ತು ಮೇನ್‌ಲೈನ್ ಕಂಟೇನರ್ ಹಡಗುಗಳ ಸಂಬಂಧಿತ ಶುಲ್ಕಗಳಲ್ಲಿ (VRC) ರಿಯಾಯಿತಿ ಘೋಷಿಸಿದೆ. ನೆರೆಯ ಬಂದರುಗಳಿಗೆ ಕಠಿಣ ಸ್ಪರ್ಧೆ ಒಡ್ಡುವ ಹಾಗೂ ಬಂದರಿನ ಮೂಲಕ ಕಂಟೇನರ್ ನಿರ್ವಹಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆಯಡಿ ಫೀಡರ್ ಲೈನ್ ಕಂಟೇನರ್ ಹಡಗುಗಳ ಬರ್ತ್ ಬಾಡಿಗೆ, ಬಂದರು ಶುಲ್ಕ ಮತ್ತು ಪೈಲಟೇಜ್ ಶುಲ್ಕಗಳಲ್ಲಿ ಶೇ. 35ರಷ್ಟು ಹಾಗೂ ಮೇನ್‌ಲೈನ್ ಕಂಟೇನರ್ ಹಡಗುಗಳಿಗೆ ಶೇ. 50ರಷ್ಟು ರಿಯಾಯಿತಿ ಸಿಗಲಿದೆ.

ಈ ಪರಿಷ್ಕೃತ ರಿಯಾಯಿತಿ ವ್ಯವಸ್ಥೆಯು 2026ರ ನವೆಂಬರ್ 3ರಿಂದ 2027ರ ಮಾರ್ಚ್ 31ರವರೆಗೆ ಲಂಗರು ಹಾಕುವ ಕಂಟೇನರ್ ಹಡಗುಗಳಿಗೆ ಮತ್ತು ಕಂಟೇನರ್ ಸರಕು ನಿರ್ವಹಣೆಗೆ ಮಾತ್ರ ಅನ್ವಯಿಸಲಿದೆ. ಧ್ವಜ ಬದಲಾವಣೆ ಅಥವಾ ಬಂಕರ್ ಇಂಧನ ಪೂರೈಕೆಯಂತಹ ಇತರ ಪೂರಕ ಚಟುವಟಿಕೆಗಳಿಗೆ ಇದು ಅನ್ವಯಿಸುವುದಿಲ್ಲ.

ಬಂದರು ವೆಚ್ಚವನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ಶಿಪ್ಪಿಂಗ್ ಸಂಸ್ಥೆಗಳು ನವ ಮಂಗಳೂರು ಬಂದರನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಇದರಿಂದ ರಫ್ತುದಾರರು, ಆಮದುದಾರರು ಮತ್ತು ವ್ಯಾಪಾರ ಸಮುದಾಯಕ್ಕೆ ನೇರ ಅನುಕೂಲವಾಗಲಿದೆ. 2025-26ನೇ ಹಣಕಾಸು ವರ್ಷದಲ್ಲಿ 1,92,307 TEUs ಕಂಟೇನರ್ ನಿರ್ವಹಿಸಿರುವ ಎನ್‌ಎಂಪಿಎ, ಹೊಸ ನೀತಿಯಿಂದ ಇನ್ನಷ್ಟು ಹೆಗ್ಗುರುತು ಸಾಧಿಸುವ ವಿಶ್ವಾಸದಲ್ಲಿದೆ. ಇದೇ ವೇಳೆ, ಅರ್ಹ ರಫ್ತುದಾರರಿಗೆ ಕಬ್ಬಿಣದ ಅದಿರಿನ ಪುಡಿ (Iron Ore Fines) ಮತ್ತು ತುಂಡುಗಳ (Lumps) ರಫ್ತಿನ ಸರಕು ಸಂಬಂಧಿತ ಶುಲ್ಕಗಳಲ್ಲಿ ಶೇ. 20ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನೂ ಬಂದರು ಈಗಾಗಲೇ ಜಾರಿಗೊಳಿಸಿದೆ.

Category
ಕರಾವಳಿ ತರಂಗಿಣಿ