ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಐದು ವರ್ಷಗಳಲ್ಲಿ 600ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಾಡಿದೆ. ಜಿಲ್ಲೆಯಲ್ಲಿ ಒಟ್ಟು 32 ದತ್ತಿ ನಿಧಿಗಳಿದ್ದು, ಅತಿ ಹೆಚ್ಚು ದತ್ತಿ ನಿಧಿಗಳು ಬಂಟ್ವಾಳದಲ್ಲೇ ಇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹೇಳಿದರು. ಅವರು ನವೆಂಬರ್ 4ರಂದು ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು (ಕರ್ನಾಟಕ ಪಬ್ಲಿಕ್ ಸ್ಕೂಲ್) ಆಶ್ರಯದಲ್ಲಿ ನಡೆದ ನೀರ್ಪಾಜೆ ಭೀಮ ಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ರಾಜೇಂದ್ರ ರೈ, ಸಾಧಕರನ್ನು ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾಹಿತ್ಯಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಬೇಕು. ಈ ದಿಸೆಯಲ್ಲಿ ಭೀಮ ಭಟ್ಟರ ಕೊಡುಗೆ ಅನನ್ಯವಾದದ್ದು. ತಾವು ಕಲಿತ ವಿದ್ಯಾಸಂಸ್ಥೆಗಳಿಗೆ ಪ್ರತಿಯೊಬ್ಬರೂ ಕೊಡುಗೆ ನೀಡುವ ಕಾರ್ಯವಾಗಬೇಕು ಎಂದು ಹೇಳಿದರು.
ತುಂಬೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ. ಬಿ. ಮಾತನಾಡಿ, ಯುವಶಕ್ತಿ ಸಾಹಿತ್ಯ ರಂಗದಲ್ಲಿ ಸಕ್ರಿಯವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಭೀಮ ಭಟ್ಟರು ಹೊಸ ಮುಖಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಊರಿನ ಪ್ರತಿಯೊಬ್ಬರಿಗೂ ಆಸರೆಯಾಗಿ ನಿಂತಿದ್ದರು. ಎಲ್ಲಾ ರಂಗಗಳಲ್ಲೂ ತೊಡಗಿಸಿಕೊಂಡು ಜನರನ್ನು ಮುಖ್ಯವಾಹಿನಿಗೆ ತರುವ ಮೂಲಕ ವ್ಯಕ್ತಿಗಳನ್ನು ಶಕ್ತಿಯಾಗಿ ಬೆಳೆಸಲು ಶ್ರಮಿಸಿದ್ದಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಕನ್ಯಾನ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಕೆ. ಪಿ. ಅಬ್ದುಲ್ ರಹಮಾನ್, ಕನ್ಯಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಪಿ. ರಘುರಾಮ ಶೆಟ್ಟಿ, ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲೆ ವಿನುತ ಕುಮಾರಿ ಹಾಗೂ ಪತ್ರಕರ್ತ ಉದಯ ಶಂಕರ್ ನೀರ್ಪಾಜೆ ಉಪಸ್ಥಿತರಿದ್ದರು. ಉಪನ್ಯಾಸಕಿ ಸವಿತಾ ಸ್ವಾಗತಿಸಿದರು, ದಿವ್ಯಾ ವಂದಿಸಿದರು ಹಾಗೂ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು.