ಮೂಡುಬಿದಿರೆ: ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 01 ರಿಂದ 03 ರವರೆಗೆ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ, ಒಟ್ಟು 11 ಚಿನ್ನ, 08 ಬೆಳ್ಳಿ ಹಾಗೂ 07 ಕಂಚಿನ ಪದಕಗಳೊಂದಿಗೆ ಬಾರೀ 26 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ತಂಡ ಪ್ರಶಸ್ತಿಯ ಜೊತೆಗೆ ಸಮಗ್ರ ಚಾಂಪಿಯನ್ಷಿಪ್ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಅದ್ಭುತ ಸಾಧನೆಯ ಆಧಾರದ ಮೇಲೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಶಾಲೆಯ 12 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಮೇಘಾ (400ಮೀ ಪ್ರಥಮ, 800ಮೀ ದ್ವಿತೀಯ, 4400ಮೀ ರಿಲೇ ಪ್ರಥಮ), ಸುಜಾತ, ಸಮೀಕ್ಷಾ ಹಾಗೂ ಅನುಶ್ರೀ ಪಿ.ಎಸ್ (4400ಮೀ ರಿಲೇ ಪ್ರಥಮ), ವೀಕ್ಷಾ, ಅನುಶ್ರೀ ದಾಸ್, ವೈಷ್ಣವಿ ಮತ್ತು ಮಾಲಾ (4*100ಮೀ ರಿಲೇ ದ್ವಿತೀಯ), ಪೂರ್ವಿ (ಹ್ಯಾಮರ್ ಎಸೆತ ದ್ವಿತೀಯ) ಹಾಗೂ ರಕ್ಷಿತಾ (ತ್ರಿವಿಧ ಜಿಗಿತ ತೃತೀಯ) ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಬಾಲಕರ ವಿಭಾಗದಲ್ಲಿ ಆದಿತ್ಯ (800ಮೀ ಪ್ರಥಮ, 4400ಮೀ ರಿಲೇ ಪ್ರಥಮ), ತುಷಾರ್ (800ಮೀ ದ್ವಿತೀಯ, 4400ಮೀ ರಿಲೇ ಪ್ರಥಮ), ಸುಭಾಷ್ (110ಮೀ ಹರ್ಡಲ್ಸ್ ದ್ವಿತೀಯ, 4400ಮೀ ರಿಲೇ ಪ್ರಥಮ), ಅಮನ್ (4400ಮೀ ರಿಲೇ ಪ್ರಥಮ, 4100ಮೀ ರಿಲೇ ತೃತೀಯ), ಕುಶಾಂತ್ (ಗುಂಡು ಎಸೆತ ತೃತೀಯ), ಆದರ್ಶ್, ಚಕ್ರವರ್ತಿ (4100ಮೀ ರಿಲೇ ತೃತೀಯ) ಹಾಗೂ ನಿಂಗಣ್ಣ ಗೌಡ (ಪೋಲ್ ವಾಲ್ಟ್ ಪ್ರಥಮ, ತ್ರಿವಿಧ ಜಿಗಿತ ದ್ವಿತೀಯ, 4*100ಮೀ ರಿಲೇ ತೃತೀಯ) ಪದಕಗಳನ್ನು ಗಳಿಸಿದ್ದಾರೆ.
ರಾಜ್ಯಮಟ್ಟದಲ್ಲಿ 26 ಪದಕಗಳನ್ನು ಗೆದ್ದು ಸಮಗ್ರ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿರುವ ಆಳ್ವಾಸ್ ಶಾಲೆಯ ಕ್ರೀಡಾಪಟುಗಳ ಸಾಧನೆ ಹೆಮ್ಮೆಯ ಸಂಗತಿಯಾಗಿದೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ 12 ಕ್ರೀಡಾಪಟುಗಳು ದೇಶದ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಶುಭ ಹಾರೈಸಿದ್ದಾರೆ.