ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಕ್ಕಳ ಹಕ್ಕುಗಳ ಸಂಘದ ವತಿಯಿಂದ ಆರೋಗ್ಯಕರ ನಡವಳಿಕೆ ಹಾಗೂ ಎಚ್ಐವಿ ಏಡ್ಸ್ ಕುರಿತು ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ, ಉತ್ತಮ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಸಮರ್ಪಕ ವಿಶ್ರಾಂತಿ ಆರೋಗ್ಯಕರ ಜೀವನದ ಪ್ರಮುಖ ಆಧಾರಗಳಾಗಿವೆ ಎಂದರು. ಆಧುನಿಕ ಆಹಾರ ಪದ್ಧತಿ ಮತ್ತು ಒತ್ತಡದ ಜೀವನಶೈಲಿಯಿಂದ ಯುವಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಜಂಕ್ಫುಡ್ಗಳಿಂದ ದೂರವಿದ್ದು ಪೌಷ್ಟಿಕ ಆಹಾರ ಸೇವನೆ ಹಾಗೂ ದಿನಕ್ಕೆ 15 ನಿಮಿಷಗಳ ವ್ಯಾಯಾಮ ರೂಢಿಸಿಕೊಳ್ಳಲು ಕರೆ ನೀಡಿದರು.
ಎಚ್ಐವಿ ಮತ್ತು ಏಡ್ಸ್ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಅಗತ್ಯವಿದೆ ಎಂದು ಉಲ್ಲೇಖಿಸಿದ ಅವರು, ಸೋಂಕಿತರೊಂದಿಗೆ ಮಾತನಾಡುವುದು, ಆಹಾರ ಹಂಚಿಕೊಳ್ಳುವುದು ಅಥವಾ ಸಾಮಾನ್ಯ ಒಡನಾಟದಿಂದ ಸೋಂಕು ಹರಡುವುದಿಲ್ಲ. ಸೋಂಕಿತರೊಂದಿಗೆ ಗೌರವ ಹಾಗೂ ಸಹಾನುಭೂತಿಯಿಂದ ವರ್ತಿಸುವ ಮೂಲಕ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡಬೇಕು ಎಂದು ಪ್ರಶ್ನೋತ್ತರಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ವಹಿಸಿದ್ದರು. ಮಕ್ಕಳ ಸುರಕ್ಷತಾ ಸಮಿತಿಯ ಸಂಚಾಲಕಿ ಮಲ್ಲಿಕಾ ಎಂ.ಆರ್. ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಆಪ್ತ ಸಮಾಲೋಚಕಿ ರೇನಿಟಾ ಡಿ'ಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.