ಗುರುವಾಯನಕೆರೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಎಸ್.ಪಿ.ವೈ.ಎಸ್.ಎಸ್ ಹವ್ಯಕ ಭವನ ಶಾಖೆಯಲ್ಲಿ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ಎಂಬ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ ನೆರವೇರಿತು.
ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯದೊಂದಿಗೆ ಕರುಣಾಮಯಿ,ತ್ಯಾಗ ಮೂರ್ತಿ ಅಮ್ಮನ ಮಹತ್ವದ ಕುರಿತು ಎಸ್.ಪಿ.ವೈ.ಎಸ್.ಎಸ್ ನೇತ್ರಾವತಿ ವಲಯ ಸಂಯೋಜಕ ಜಯರಾಮ ಅವರು ಪ್ರಧಾನ ಭಾಷಣಕಾರರಾಗಿ ಆಗಮಿಸಿ, ಮಾತನಾಡಿದರು.
ಹೊಸನಗರ ಶ್ರೀ ರಾಮಚಂದ್ರಾಪುರ ಮಠ ಮಾತೃ ಮಂಡಳಿ ಹಾಗು ಹವ್ಯಕಭವನ ಮಾತೃ ಮಂಡಳಿಯ ಅಧ್ಯಕ್ಷೆ ದೇವಿಕಾ ಶಾಸ್ತ್ರಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ, ಮಕ್ಕಳಿಗೆ ತಾಯಂದಿರು ಬಾಲ್ಯದಿಂದಲೇ ಸಂಸ್ಕಾರದ ಪಾಠ ಕಲಿಸಬೇಕು ಎಂಬ ಸಂದೇಶದೊಂದಿಗೆ ಶುಭ ಹಾರೈಸಿದರು.ಗಾಣಿಗರ ಸಮುದಾಯ ಭವನದ ಶಾಖೆಯ ಯೋಗ ಶಿಕ್ಷಕಿ ಆಶಾ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.
ಯೋಗ ತರಗತಿಯ ಬಂಧುಗಳು ತಾವು ಮನೆಯಲ್ಲಿ ಪ್ರಸಾದರೂಪದಲ್ಲಿ ತಯಾರಿಸಿ ತಂದ ವಿವಿಧ ತಿನಿಸುಗಳನ್ನು ಮಾತೆಯರು ಎಲ್ಲರಿಗೂ ಕೈತುತ್ತು ನೀಡುವ ಮೂಲಕ ಮಾತೃಭೋಜನ ಕಾರ್ಯಕ್ರಮ ನಡೆಸಿಕೊಟ್ಟರು.
ತಾಯಿಯ ಮಹತ್ವವನ್ನು ಅರ್ಥೈಸುವ ಉದ್ದೇಶವನ್ನು ಇಟ್ಟುಕೊಂಡು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ತಾಲೂಕು ಸಂಚಾಲಕ ಸಂತೋಷ್ ಹಾಗು ವಿವಿಧ ಶಾಖೆಗಳ ಶಿಕ್ಷಕರು, ಹಾಗೂ 190 ಮಂದಿ ಯೋಗ ಹಾಗು ಯೋಗೇತರ ಬಂಧುಗಳು ಪಾಲ್ಗೊಂಡಿದ್ದರು.
ಯೋಗ ಶಿಕ್ಷಕರಾದ ಪ್ರದೀಪ್, ಆನಂದ್ ಹಾಗು ಪ್ರೇಮಲತಾ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿತ್ತು.
ದಯಾನಂದ ವಂದೇಮಾತರಂ ಗೀತೆ ಹಾಡಿದರು. ಬ್ರಾಹ್ಮೀ ಅವರು ವೈಯುಕ್ತಿಕ ಗೀತೆ ಹಾಡಿದರು. ದಮಯಂತಿ ಸ್ವಾಗತಿಸಿ, ಪೂರ್ಣಿಮಾ ವರದಿ ವಾಚಿಸಿದರು. ಜಯಂತಿ ಏಕನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಸುಮಲತಾ ವಂದಿಸಿದರು.