ಮಂಗಳೂರು : ಮಂಗಳೂರಿನ ಕರಾವಳಿ ತುಳುನಾಡಿನ ಕಲೆ, ಇತಿಹಾಸ, ಸಂಸ್ಕೃತಿ ಮತ್ತು ಜನಜೀವನಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ಜಿಲ್ಲೆಯ ಪ್ರಥಮ ತುಳುವಾಹಿನಿ 'ನಮ್ಮಕುಡ್ಲ' ಸಂಸ್ಥೆಯ ವತಿಯಿಂದ 26 ನೇ ವರ್ಷದ ಬೃಹತ್ ಗೂಡುದೀಪ ಸ್ಪರ್ಧೆ ಮತ್ತು ವಿವಿಧ ಪ್ರಶಸ್ತಿ ಪ್ರಧಾನ ಸಮಾರಂಭವು ನವೆಂಬರ್ 7ರಂದು ಶನಿವಾರ ಮಂಗಳೂರಿನ ವಿಶ್ವವಿಖ್ಯಾತ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿಯಲ್ಲಿ ನೆರವೇರಲಿದೆ ಎಂದು ಕದ್ರಿ ನವನೀತ್ ಶೆಟ್ಟಿ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಢಿದ ಅವರು,
ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರ ರೂವಾರಿ ಶ್ರೀ ಬಿ. ಜನಾರ್ದನ ಪೂಜಾರಿ ಅವರ ಸತತ ಪ್ರೋತ್ಸಾಹ, ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ನಡೆಯಲಿರುವ ಈ ಸ್ಪರ್ಧೆಯು ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ಜರುಗಲಿದೆ. ಯಾವುದೇ ವಯೋಮಾನದ ನಿಬಂಧನೆಯಿಲ್ಲದೆ ನಡೆಯುವ ಈ ಸ್ಪರ್ಧೆಯ ಪ್ರತಿ ವಿಭಾಗದ ವಿಜೇತರಿಗೆ ಚಿನ್ನದ ಪದಕ ಹಾಗೂ ವಿಶೇಷ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆ, ಸಿಹಿ ತಿಂಡಿ ಹಾಗೂ ಶ್ರೀಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು. ಜೊತೆಗೆ ಈ ಬಾರಿ ವಿಶೇಷ ಆಕರ್ಷಣೆಯಾಗಿ 'ರೀಲ್ಸ್ ಸ್ಪರ್ಧೆ'ಯನ್ನೂ ಆಯೋಜಿಸಲಾಗಿದೆ ಎಂದರು.
ಸಮಾರಂಭದಲ್ಲಿ ವಿವಿಧ ರಂಗಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ತುಳು-ಕನ್ನಡ ರಂಗಭೂಮಿ ನಟ ಹಾಗೂ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಅವರಿಗೆ 'ನಮ್ಮಕುಡ್ಲ ಪ್ರಶಸ್ತಿ 2026', ಗುಜರಾತ್ನ ಬರೋಡಾದಲ್ಲಿ ಉದ್ಯಮಿಯಾಗಿ ಸಾಮಾಜಿಕ ಸೇವೆ ಸಲ್ಲಿಸಿದ ಶಶಿಧರ ಶೆಟ್ಟಿ ಬರೋಡ ಅವರಿಗೆ 'ನಮ್ಮ ತುಳುವೆರ್ ಪ್ರಶಸ್ತಿ 2026', ಸಮಾಜ ಸೇವೆಯಲ್ಲಿ 40 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಉಳ್ಳಾಲ ಮೋಗವೀರಪಟ್ಟಣದ ಮಾರುತಿ ಜನಸೇವಾ ಟ್ರಸ್ಟ್ ಹಾಗೂ ಮಾರುತಿ ಯುವಕ ಮಂಡಲಕ್ಕೆ 'ನಮ್ಮಕುಡ್ಲ ಸೇವಾ ಪ್ರಶಸ್ತಿ 2026' ಮತ್ತು ಸ್ವರ್ಗೀಯ ಬಾಬು ಕರ್ಕೇರ ಹಾಗೂ ಲಕ್ಷ್ಮೀ ಬಿ. ಕರ್ಕೇರ ಸ್ಮರಣಾರ್ಥ ನೀಡಲಾಗುವ 'ಆದರ್ಶ ದಂಪತಿ ಪ್ರಶಸ್ತಿ 2026' ಅನ್ನು ವೇದಮೂರ್ತಿ ಚಂದ್ರಕಾಂತ ಭಟ್ ಮತ್ತು ಶ್ರೀಮತಿ ಅನ್ನಪೂರ್ಣ ದಂಪತಿಗೆ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಸಹಕಾರಿ ರಂಗದ ಸಾಧಕ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಅಂಕಣಗಾರ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ, ಪತ್ರಿಕೋದ್ಯಮಿ ದಿವಾಕರ ಬೈಕಂಪಾಡಿ ಹಾಗೂ ಶಿಕ್ಷಣ ತಜ್ಞ ಪ್ರೊ. ಎಂ. ಎಸ್. ಕೋಟ್ಯಾನ್ ಅವರಿಗೆ ಸಂಸ್ಥೆಯ ವತಿಯಿಂದ 'ನಮ್ಮಕುಡ್ಲ ಸಾಧಕ ಗೌರವ' ಸಲ್ಲಿಸಲಾಗುವುದು. ಸಂಜೆ 3 ಗಂಟೆಗೆ ಭಜನಾ ಕಾರ್ಯಕ್ರಮದೊಂದಿಗೆ ಆರಂಭವಾಗಲಿರುವ ಈ ಸಮಾರಂಭದಲ್ಲಿ ಸನಾತನ ನಾಟ್ಯಾಲಯದಿಂದ ನೃತ್ಯ ವೈಭವ ಹಾಗೂ ಜಗದೀಶ್ ಪುತ್ತೂರು ತಂಡದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಲೀಲಾಕ್ಷ ಬಿ. ಕರ್ಕೇರ ಸೇರಿದಂತೆ ದಯಾನಂದ ಕಟೀಲ್, ಶ್ರೀಕಾಂತ್ ರಾವ್ ಹಾಗೂ ಸುದರ್ಶನ್ ಕೋಟ್ಯಾನ್ ಉಪಸ್ಥಿತರಿದ್ದರು.