ಮಂಗಳೂರು : ಮಂಗಳೂರಿನ ಮಧ್ಯಭಾಗದಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆ ಬೆಸೆಂಟ್ ಸಂಜೆ ಕಾಲೇಜು ತನ್ನ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಈ ಐತಿಹಾಸಿಕ ಘಟ್ಟದ ವರ್ಷಪೂರ್ತಿ ಕಾರ್ಯಕ್ರಮಗಳಿಗೆ ನವೆಂಬರ್ 6ರ ಶುಕ್ರವಾರ ಸಂಜೆ 5:30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಅಧಿಕೃತ ಚಾಲನೆ ದೊರೆಯಲಿದೆ ಎಂದು ಕಾಲೇಜಿನ ಸಂಚಾಲಕಿ ಶ್ರೀಮತಿ ಲಲಿತಾ ಜಿ. ಮಲ್ಯ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
‘ಕಲಿಯುತ್ತಾ ಗಳಿಸಿ’ (Learn While You Earn) ಎಂಬ ಪ್ರಮುಖ ಧೇಯವಾಕ್ಯದೊಂದಿಗೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ 1976ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಕಳೆದ ಐದು ದಶಕಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಕೊಡುಗೆ ನೀಡುತ್ತಾ ಬಂದಿದೆ. ಹಿರಿಯ ಧುರೀಣ ಮನೆ ಶ್ರೀನಿವಾಸ್ ನಾಯ್ಕ್ ಅವರಿಂದ ಆರಂಭಗೊಂಡ ಈ ಸಂಧ್ಯಾ ಕಾಲೇಜು, ಉದ್ಯೋಗನಿರತರಿಗೆ, ಹಿರಿಯರಿಗೆ ಹಾಗೂ ವಿವಿಧ ವಯೋಮಾನದವರಿಗೆ ಪದವಿ ಶಿಕ್ಷಣದ ಜತೆಗೆ ಜಿಎಸ್ಟಿ, ಸ್ಪೋಕನ್ ಇಂಗ್ಲಿಷ್ ಮುಂತಾದ ಮೌಲ್ಯವರ್ಧಿತ ಹಾಗೂ ಕೌಶಲ್ಯಾಧಾರಿತ ಕೋರ್ಸ್ಗಳನ್ನು ಒದಗಿಸುತ್ತಾ ಸಾಟಿಯಿಲ್ಲದ ಸೇವೆ ಸಲ್ಲಿಸುತ್ತಿದೆ ಎಂದರು.
ವರ್ಷಪೂರ್ತಿ ನಡೆಯಲಿರುವ ಈ ಸುವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ಗೌತಮ್ ಡಿ. ಪೈ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಶ್ರೀ ಸುಮಂತ್ ರಾವ್, ವರಾಜ್ಯ ದೇಸಾಯಿ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಶ್ರೀ ಪ್ರವೀಣ್ ಪೂಜಾರಿ ಹಾಗೂ ಶ್ರೀ ಶಬರಿ ಕ್ಯಾಟರರ್ಸ್ನ ಶ್ರೀ ಎಲ್. ಎನ್. ರಾಜೇಶ್ ಶೆಟ್ಟಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ನಾಯ್ಕ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ನಾಯ್ಕ್, ಕಾರ್ಯದರ್ಶಿ ಶ್ರೀ ಸುರೇಶ್ ಪೈ, ಪ್ರಾಂಶುಪಾಲರಾದ ಶ್ರೀ ಗೋಪಾಲ ರೆಡ್ಡಿ, ವಿದ್ಯಾರ್ಥಿ ಪ್ರತಿನಿಧಿ ದಿಗಂತ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಭಿಷೇಕ್ ಉಪಸ್ಥಿತರಿದ್ದರು.