image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಡಿಯನ್ ಮಾರಿಟೈಮ್ ಯೂನಿವರ್ಸಿಟಿಯ ಉಪಕುಲಪತಿಯಾಗಿ ಡಾ. ವೆಂಕಟ ರಮಣ ಅಕ್ಕರಾಜು ನೇಮಕ

ಇಂಡಿಯನ್ ಮಾರಿಟೈಮ್ ಯೂನಿವರ್ಸಿಟಿಯ ಉಪಕುಲಪತಿಯಾಗಿ ಡಾ. ವೆಂಕಟ ರಮಣ ಅಕ್ಕರಾಜು ನೇಮಕ

ಮಂಗಳೂರು : ಭಾರತ ಸರ್ಕಾರದ ಪ್ರತಿಷ್ಠಿತ ಕೇಂದ್ರೀಯ ವಿಶ್ವವಿದ್ಯಾಲಯವಾದ 'ಇಂಡಿಯನ್ ಮಾರಿಟೈಮ್ ಯೂನಿವರ್ಸಿಟಿ' (IMU) ಉಪಕುಲಪತಿಯಾಗಿ ಡಾ. ವೆಂಕಟ ರಮಣ ಅಕ್ಕರಾಜು ಅವರನ್ನು ಮಾನ್ಯ ಭಾರತದ ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಹಂತದ ಹುದ್ದೆಗೆ ಸಮಾನವಾದ ಈ ಜವಾಬ್ದಾರಿಯು ದೇಶದ ಕಡಲ ಶಿಕ್ಷಣ ಹಾಗೂ ಬಂದರು ಕ್ಷೇತ್ರದಲ್ಲಿ ಅವರ ಸುದೀರ್ಘ ಕೊಡುಗೆಗೆ ಸಿಕ್ಕ ಗೌರವವಾಗಿದೆ.

ಡಾ. ವೆಂಕಟ ರಮಣ ಅಕ್ಕರಾಜು ಅವರು ಬಂದರು ಮತ್ತು ನೌಕಾಯಾನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಹೆಸರಾಂತ ತಜ್ಞರಾಗಿದ್ದಾರೆ. ಇವರು 2018 ರಿಂದ 2025 ರವರೆಗೆ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಅಧ್ಯಕ್ಷರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ 2016 ರಿಂದ 2018 ರವರೆಗೆ ಕೊಚ್ಚಿನ್ ಪೋರ್ಟ್ ಅಥಾರಿಟಿಯ ಅಧ್ಯಕ್ಷರಾಗಿ ಹಾಗೂ 2022 ರಿಂದ 2023 ರವರೆಗೆ ಗೋವಾ ಪೋರ್ಟ್ ಅಥಾರಿಟಿಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದ್ದರು.

ಸಾರ್ವಜನಿಕ ವಲಯದ ಸೇವೆಯ ನಂತರ ಇವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. 2025 ರಿಂದ 2026 ರ ಸೆಪ್ಟೆಂಬರ್ ಅವಧಿಯಲ್ಲಿ ಪುಣೆಯ ಪ್ರಮುಖ ಸಾಫ್ಟ್‌ವೇರ್ ಸಂಸ್ಥೆಯಾದ 'ಶ್ರೀ ಟೆಕ್ ಡಾಟಾ ಲಿಮಿಟೆಡ್'ನಲ್ಲಿ ಕಾರ್ಯಾಂಗ ಅಧ್ಯಕ್ಷರಾಗಿ (Executive Chairman) ಕಾರ್ಯನಿರ್ವಹಿಸಿದ್ದರು.

ಬಂದರು ಅಭಿವೃದ್ಧಿ ಹಾಗೂ ನೌಕಾಯಾನ ಕ್ಷೇತ್ರದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಅಕ್ಕರಾಜು ಅವರು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ 7ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಸುದೀರ್ಘ ಅನುಭವ ಮತ್ತು ತಾಂತ್ರಿಕ ಜ್ಞಾನವು ಇಂಡಿಯನ್ ಮಾರಿಟೈಮ್ ಯೂನಿವರ್ಸಿಟಿಯನ್ನು ಶೈಕ್ಷಣಿಕವಾಗಿ ಹಾಗೂ ಸಂಶೋಧನಾತ್ಮಕವಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ನಿರೀಕ್ಷಿಸಲಾಗಿದೆ.

Category
ಕರಾವಳಿ ತರಂಗಿಣಿ