image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಳಿಕೆಯ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಅಳಿಕೆಯ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವಾರ್ಪಣೆ

ಧರ್ಮಸ್ಥಳ : ಅಳಿಕೆ ಸಂಸ್ಥೆಗಳ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಶಿಕ್ಷಕರು ಹಾಗೂ 36 ವಿದ್ಯಾರ್ಥಿಗಳ ನಿಯೋಗವು ಧರ್ಮಸ್ಥಳಕ್ಕೆ ಆಗಮಿಸಿ, ಪೂಜ್ಯ ಹೆಗ್ಗಡೆಯವರನ್ನು ಭೇಟಿಯಾಗಿ ಆದರದಿಂದ ಗೌರವಿಸಿತು. ಧರ್ಮಾಧಿಕಾರಿಗಳ ಸನ್ನಿಧಿಯಲ್ಲಿ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಭಾಗವಹಿಸಿದ್ದರು.

ಪ್ರಸ್ತಾವಿಕವಾಗಿ ಮಾತನಾಡಿದ ಅಳಿಕೆ ಸಂಸ್ಥೆಗಳ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಅವರು, ಧರ್ಮಸ್ಥಳ ಹಾಗೂ ಅಳಿಕೆ ಶಿಕ್ಷಣ ಸಂಸ್ಥೆಗಳ ನಡುವೆ ದಶಕಗಳಿಂದಲೂ ಅವಿನಾಭಾವ ಹಾಗೂ ಪವಿತ್ರ ಸಂಬಂಧವಿದೆ ಎಂದರು. ಅಳಿಕೆಯ ವಿದ್ಯಾಸಂಸ್ಥೆಗಳ ಸ್ಥಾಪನೆ, ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ ನಿರಂತರ ಬೆಂಬಲ, ಮಾರ್ಗದರ್ಶನ ಹಾಗೂ ಕೊಡುಗೆಯನ್ನು ಅತ್ಯಂತ ಶ್ಲಾಘನೀಯವಾಗಿ ಸ್ಮರಿಸಿ, ಅವರಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಅಳಿಕೆಯ ಶಿಕ್ಷಣ ಸಂಸ್ಥೆಗಳ ಮೂಲ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ ಅವರ ನಿಸ್ವಾರ್ಥ ಸೇವೆ ಹಾಗೂ ತ್ಯಾಗವನ್ನು ಸ್ಮರಿಸಿದ ಅವರು, ನವೆಂಬರ್ ೨೯ರ ಭಾನುವಾರದಂದು ಆಯೋಜಿಸಲಾಗಿರುವ ಮಡಿಯಾಲ ಅವರ ಜನ್ಮಶತಮಾನೋತ್ಸವ ಸಮಾರಂಭದ ಕುರಿತು ಮಾಹಿತಿ ನೀಡಿದರು. ಈ ಐತಿಹಾಸಿಕ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಹೆಗ್ಗಡೆಯವರನ್ನು ಅತ್ಯಂತ ಆದರ ಹಾಗೂ ಗೌರವದಿಂದ ಆಹ್ವಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿ. ಹರ್ಷೇಂದ್ರ ಕುಮಾರ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಗೌರವಾರ್ಪಣೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಗ್ರಾಮೀಣ ಭಾಗದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಅಳಿಕೆ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವ ಸೇವೆ ಹಾಗೂ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮಡಿಯಾಲ ನಾರಾಯಣ ಭಟ್ಟರು ಹಾಕಿಕೊಟ್ಟ ದಾರಿಯಲ್ಲಿ ಸಂಸ್ಥೆಯು ಬೆಳೆಯುತ್ತಿರುವುದು ಸಂತಸದ ವಿಷಯವಾಗಿದ್ದು, ಮುಂದೆಯೂ ಅಳಿಕೆಯ ಎಲ್ಲಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಉತ್ತರೋತ್ತರ ಅಭಿವೃದ್ಧಿ ಹಾಗೂ ಪ್ರಗತಿಯನ್ನು ಸಾಧಿಸಲಿ ಎಂದು ಮನಃಪೂರ್ವಕವಾಗಿ ಶುಭ ಹಾರೈಸಿದರು.

Category
ಕರಾವಳಿ ತರಂಗಿಣಿ