ಯುಎಇ/ತುಂಬೆ : ಅಜ್ಮಾನ್ನ ತುಂಬೆ ಮೆಡಿಸಿಟಿಯಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರಶಸ್ತಿ ಸಮಾರಂಭದಲ್ಲಿ ತುಂಬೆ ಯುನಿವರ್ಸಿಟಿ ಹಾಸ್ಪಿಟಲ್ನ ತುಂಬೆ ಇನ್ಸ್ಟಿಟ್ಯೂಟ್ ಆಫ್ ಆಸ್ತೆಟಿಕ್ಸ್ (TIA) ತನ್ನ ಸೇವೆಗಳ ಬೃಹತ್ ವಿಸ್ತರಣೆಯನ್ನು ಘೋಷಿಸಿದೆ.
"ಸೌಂದರ್ಯ ವರ್ಧಕ ಮತ್ತು ಪ್ಲಾಸ್ಟಿಕ್ ಸರ್ಜರಿಯ ಭವಿಷ್ಯ" ಎಂಬ ಪರಿಕಲ್ಪನೆಯಡಿಯಲ್ಲಿ ಈ ಸಮ್ಮೇಳನ ನಡೆಯಿತು. ಫೆಡರಲ್ ನ್ಯಾಷನಲ್ ಕೌನ್ಸಿಲ್ನ ಸದಸ್ಯೆಯಾದ ಗೌರವಾನ್ವಿತ ಆಯಿಷಾ ಇಬ್ರಾಹಿಂ ಅಲ್ ಮರ್ರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಟಿಐಎನ ಎರಡು ಹೊಸ ಸೇವೆಗಳಾದ 'ಮುಂದಿನ ಪೀಳಿಗೆಯ ಲೇಸರ್ ಹಾಗೂ ಸುಧಾರಿತ ಆಸ್ತೆಟಿಕ್ ತಂತ್ರಜ್ಞಾನ' ಮತ್ತು ಸಂಸ್ಥೆಯ ಸ್ವಂತ ಸ್ಕಿನ್ಕೇರ್ ಉತ್ಪನ್ನ 'ಟಿಐಎ ಲಕ್ಸರಿ ಸ್ಕಿನ್ ಕಲೆಕ್ಷನ್' ಅನ್ನು ಬಿಡುಗಡೆ ಮಾಡಿದರು.
7.5 ಸಿಎಂಇ (CME) ಅವಧಿಗಳ ಮಾನ್ಯತೆ ಹೊಂದಿದ್ದ ಈ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಯುಎಇ ಹಾಗೂ ವಿದೇಶಗಳ ಪ್ಲಾಸ್ಟಿಕ್ ಸರ್ಜನ್ನರು, ಚರ್ಮರೋಗ ತಜ್ಞರು ಮತ್ತು ಆಸ್ತೆಟಿಕ್ ತಜ್ಞರು ಭಾಗವಹಿಸಿದ್ದರು. ಮುಖದ ಅಂಗರಚನೆ, ಫಿಲ್ಲರ್ಗಳು, ಬೊಟುಲಿನಮ್ ಟಾಕ್ಸಿನ್, ಜೆ-ಪ್ಲಾಸ್ಮಾ ಮತ್ತು ಪೆಪ್ಟೈಡ್ ಚಿಕಿತ್ಸೆಗಳ ಕುರಿತು ಚರ್ಚೆಗಳು ನಡೆದವು. ಕಾರ್ಯಕ್ರಮದ ಕೊನೆಯಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ 21 ತಜ್ಞರನ್ನು ಗೌರವಿಸಲಾಯಿತು.
2024ರ ಕೊನೆಯಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಇದುವರೆಗೆ 75,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಿದೆ. ಈ ವರ್ಷ ಫುಜೈರಾದ ತುಂಬೆ ಆಸ್ಪತ್ರೆಗೆ ತನ್ನ ಸೇವೆಗಳನ್ನು ವಿಸ್ತರಿಸಿದ್ದು, 'ಟಿಐಎ ವೆಲ್ನೆಸ್ & ಬ್ಯೂಟಿ ಸ್ಟೋರ್' ಹಾಗೂ 'ಬ್ಲೆಂಡ್ಸ್ & ಬ್ರೂಸ್ ನರಿಶ್' ವೆಲ್ನೆಸ್ ಕೆಫೆಯನ್ನು ಆರಂಭಿಸಿದೆ. ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಸಹಯೋಗದೊಂದಿಗೆ 20ಕ್ಕೂ ಹೆಚ್ಚು ಪ್ರಮಾಣಪತ್ರ ಕೋರ್ಸ್ಗಳನ್ನು ನೀಡುತ್ತಿದೆ.
ಮುಂದಿನ ಹಂತದಲ್ಲಿ, ಪುನರುಜ್ಜೀವನ ವೈದ್ಯಕೀಯ (Regenerative Medicine) ಮತ್ತು ಐವಿ ಥೆರಪಿ ನೀಡುವ 'ಲಾಂಗಿವಿಟಿ ಕ್ಲಿನಿಕ್', ಕೂದಲು ಕಸಿ ಕ್ಲಿನಿಕ್ ಹಾಗೂ ದುಬೈನ ತುಂಬೆ ಮೆಡಿಸಿಟಿಯಲ್ಲಿ ಪ್ರಮುಖ ಸಂಸ್ಥೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಸಂಸ್ಥೆಯ ಭವಿಷ್ಯದ ಯೋಜನೆಗಳ ಕುರಿತು ತುಂಬೆ ಗ್ರೂಪ್ನ ಹೆಲ್ತ್ಕೇರ್ ವಿಭಾಗದ ಉಪಾಧ್ಯಕ್ಷರಾದ ಅಕ್ಬರ್ ಮೊಯಿಧಿನ್ ತುಂಬೆ ಮಾತನಾಡಿ, ವಿಶ್ವವಿದ್ಯಾಲಯ ಆಸ್ಪತ್ರೆಯ ಮೇಲಿನ ನಂಬಿಕೆಯಿಂದ ರೋಗಿಗಳು ಇಲ್ಲಿಗೆ ಬರುತ್ತಾರೆ. ಮುಂದಿನ ದಿನಗಳಲ್ಲಿ ದುಬೈಗೆ ಸೇವೆ ವಿಸ್ತರಿಸುವುದು ಹಾಗೂ ಲಾಂಗಿವಿಟಿ ಮತ್ತು ಕೇಶ ರಕ್ಷಣೆ ಸೇವೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.