ಮಂಗಳೂರು : ಉಳ್ಳಾಲ ಹೊಯ್ಗೆ ಪ್ರದೇಶದಲ್ಲಿ ಹಾನಿಗೊಳಗಾದ ಕಾಲುಸೇತುವೆ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಪರಿಶೀಲನೆಗಾಗಿ ಆಯುಕ್ತರು ದೋಣಿಯಲ್ಲಿ ಸಂಚರಿಸಿದರು. ಈ ವೇಳೆ ಸ್ಥಳೀಯ ನಿವಾಸಿಗಳು ಕುಡಿಯುವ ನೀರಿನ ಅಭಾವ, ಪೈಪ್‍ಲೈನ್ ಅಳವಡಿಕೆ, ಬಸ್ ನಿಲ್ದಾಣ ಹಾಗೂ ರಸ್ತೆ ಸೌಕರ್ಯ ಒದಗಿಸುವಂತೆ ಮನವಿ ಸಲ್ಲಿಸಿದರು. ಮುಂಬರುವ ಬೇಸಿಗೆ ಮತ್ತು ಬರಗಾಲದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡುವುದಾಗಿ ಆಯುಕ್ತರು ಭರವಸೆ ನೀಡಿದರು. ಪೈಪ್‍ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಕನಿಷ್ಠ 50 ನಿವಾಸಿಗಳ ಸಹಿಯೊಂದಿಗಿನ ಮನವಿಯನ್ನು ನವೆಂಬರ್ 4 ರೊಳಗೆ ಪಾಲಿಕೆಗೆ ಸಲ್ಲಿಸಲು ಸೂಚಿಸಿದ್ದು, ಮುಂದಿನ ವಾರದೊಳಗೆ ಟೆಂಡರ್ ಅನುಮೋದನೆ ಪಡೆದು ತುರ್ತು ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.
ಬಳಿಕ ಬಜಾಲ್‍ನಲ್ಲಿರುವ ಮಹಾನಗರಪಾಲಿಕೆ ಹಾಗೂ 'ಪ್ಲಾಸ್ಟಿಕ್ ಫಿಶರ್' ಸ್ವಯಂಸೇವಾ ಸಂಸ್ಥೆಯ ಸಹಯೋಗದ ಮೆಟೀರಿಯಲ್ ರಿಕವರಿ ಪ್ಲಾಂಟ್‍ಗೆ ಭೇಟಿ ನೀಡಿ ತ್ಯಾಜ್ಯ ಮರುಬಳಕೆ ಪ್ರಕ್ರಿಯೆಯನ್ನು ವೀಕ್ಷಿಸಿ, ಸಂಸ್ಥೆಗೆ ಅಗತ್ಯ ಬೆಂಬಲ ನೀಡುವ ಭರವಸೆ ಇತ್ತರು. ನಂತರ ಜೆಪ್ಪಿನಮೊಗರು–ಕುಡ್ಪಾಡಿ ರಸ್ತೆಯ ರಾಜಕಾಲುವೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯನ್ನು (Trash Boom) ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪಆಯುಕ್ತ (ಅಭಿವೃದ್ಧಿ) ನರೇಶ್ ಪಿ. ಶೆಣೈ ಸೇರಿದಂತೆ ಪರಿಸರ ಮತ್ತು ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.