ಮಂಗಳೂರು: ಸಹ್ಯಾದ್ರಿ ಕಾಲೇಜು ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ‘ಸಿಂಚನ 2026’ ಅಂತರ ವಿಭಾಗೀಯ ಸಾಂಸ್ಕೃತಿಕ ಸಂಭ್ರಮವು ಕಾಲೇಜಿನ ಸೃಷ್ಟಿ ಸಭಾಂಗಣದಲ್ಲಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಸಿದ್ಧ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರು ಚೆಂಡೆ ಬಾರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ನೆಲ, ಜಲ ಹಾಗೂ ಮಾತೃಭಾಷೆಯನ್ನು ಅಭಿಮಾನದಿಂದ ಪೋಷಿಸಿಕೊಳ್ಳಬೇಕು. ಜೀವನದಲ್ಲಿ ಯಾವುದಾದರೂ ಒಂದು ಕಲೆಯನ್ನು ಕರಗತ ಮಾಡಿಕೊಂಡರೆ ಅಂಥವರ ಬದುಕು ಸುಂದರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. "ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕ್ಕೆ" ಎಂಬ ನುಡಿಯನ್ನು ಸ್ಮರಿಸಿದ ಅವರು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಪ್ರೇರಣೆ ನೀಡಲಿವೆ. ಎಲ್ಲರೂ ಒಟ್ಟಾಗಿ ಕನ್ನಡ ಭಾಷೆಯ ಹಿರಿಮೆ ಮತ್ತು ಸೌಂದರ್ಯವನ್ನು ಸದಾ ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮತ್ತೊಬ್ಬ ಅತಿಥಿಯಾಗಿ ಭಾಗವಹಿಸಿದ್ದ ಭಂಡಾರಿ ಫೌಂಡೇಶನ್ ಟ್ರಸ್ಟಿ ದೇವದಾಸ್ ಹೆಗ್ಗಡೆ ಅವರು ಕನ್ನಡ ರಾಜ್ಯೋತ್ಸವದ ಮಹತ್ವ ಕುರಿತು ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಬೇಕು. ಪ್ರಾಥಮಿಕ ಹಂತದಲ್ಲಿ, ವಿಶೇಷವಾಗಿ 4ನೇ ತರಗತಿಯವರೆಗೆ ಮಾತೃಭಾಷೆ ಕನ್ನಡದಲ್ಲಿ ಕಲಿಯುವುದು ಅತ್ಯಂತ ಸೂಕ್ತ ಹಾಗೂ ಪರಿಣಾಮಕಾರಿ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಭಂಡಾರಿ ಫೌಂಡೇಶನ್ನ ಟ್ರಸ್ಟಿಗಳಾದ ಜಗನ್ನಾಥ ಚೌಟ, ಕೃಷ್ಣ ಹೆಗಡೆ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಹಾಗೂ ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ರಾವ್, ಕಲಾ ಮತ್ತು ಸಾಂಸ್ಕೃತಿಕ ಸಂಯೋಜಕರಾದ ನವೀನ್ ಪಿಲಾರ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.