ಮಂಗಳೂರು: ಮೆಸ್ಕಾಂ (ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ) ಪುತ್ತೂರು ನಗರ ಹಾಗೂ ಪುತ್ತೂರು ಗ್ರಾಮಾಂತರ ಉಪವಿಭಾಗಗಳಿಗೆ ಒಳಪಡುವ ವಿದ್ಯುತ್ ಗ್ರಾಹಕರ ಕುಂದುಕೊರತೆ ಮತ್ತು ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ನವೆಂಬರ್ 5ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ವಿಶೇಷ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಈ ಜನಸಂಪರ್ಕ ಸಭೆಯು ಪುತ್ತೂರು ನಗರ ಉಪವಿಭಾಗ ಕಚೇರಿಯ ಆವರಣದಲ್ಲಿ ನಡೆಯಲಿದ್ದು, ಮೆಸ್ಕಾಂನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶದ ಗ್ರಾಹಕರು ನೇರವಾಗಿ ಭಾಗವಹಿಸಿ ತಮ್ಮ ವಿದ್ಯುತ್ ಸಂಬಂಧಿತ ದೂರುಗಳು, ಸವಾಲುಗಳು ಹಾಗೂ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ನೇರವಾಗಿ ಆಗಮಿಸಲು ಸಾಧ್ಯವಾಗದ ಗ್ರಾಹಕರು ದೂರವಾಣಿ ಕರೆಯ ಮೂಲಕವೂ ತಮ್ಮ ಅಹವಾಲುಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಹಾಗೂ ಗ್ರಾಹಕರು ದೂರವಾಣಿ ಸಂಖ್ಯೆ 08251-230393ಕ್ಕೆ ಸಂಪರ್ಕಿಸಿ ತಮ್ಮ ದೂರುಗಳನ್ನು ದಾಖಲಿಸಬಹುದಾಗಿದೆ.
ವಿದ್ಯುತ್ ಸರಬರಾಜು, ಬಿಲ್ಲುಗಳ ವ್ಯತ್ಯಾಸ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳಲು ಆಯೋಜಿಸಲಾಗಿರುವ ಈ ಸಭೆಯ ಸಂಪೂರ್ಣ ಪ್ರಯೋಜನವನ್ನು ಮೆಸ್ಕಾಂ ಗ್ರಾಹಕರು ಪಡೆದುಕೊಳ್ಳಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.