image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೃಷಿ ಸಂಶೋಧನೆಯ ಲಾಭ ರೈತರಿಗೆ ಸಿಗಲಿ: ಮಂಗಳೂರಿನಲ್ಲಿ ಕೃಷಿ ಸಖಿಯರಿಗೆ 6 ದಿನಗಳ ತರಬೇತಿ

ಕೃಷಿ ಸಂಶೋಧನೆಯ ಲಾಭ ರೈತರಿಗೆ ಸಿಗಲಿ: ಮಂಗಳೂರಿನಲ್ಲಿ ಕೃಷಿ ಸಖಿಯರಿಗೆ 6 ದಿನಗಳ ತರಬೇತಿ

ಮಂಗಳೂರು: ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಸಂಶೋಧನೆ ಹಾಗೂ ಹೊಸ ತಳಿಗಳ ಅಭಿವೃದ್ಧಿಯ ಮಾಹಿತಿ ಪ್ರತಿಯೊಬ್ಬ ರೈತರಿಗೂ ತಲುಪಬೇಕು ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ. ರಮೇಶ್ ತಿಳಿಸಿದ್ದಾರೆ. ಮಂಗಳೂರು ಕೃಷಿ ವಿಜ್ಞಾನ ಕೇಂದ್ರ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಖಿಯರಿಗಾಗಿ ಆಯೋಜಿಸಲಾದ 6 ದಿನಗಳ ಸಾಂಸ್ಥಿಕ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಆಧುನಿಕ ಕೃಷಿ ಯಂತ್ರೋಪಕರಣಗಳ ಪರಿಚಯ, ಭತ್ತ ಮತ್ತು ತರಕಾರಿ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು, ಕೀಟ ಹಾಗೂ ರೋಗ ನಿರ್ವಹಣೆ, ಮಣ್ಣಿನ ಆರೋಗ್ಯ ಮತ್ತು ಗೊಬ್ಬರದ ಸಫಲ ಬಳಕೆ ಕುರಿತು ತರಬೇತಿಯಲ್ಲಿ ಸಮಗ್ರ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಕೃಷಿ ಇಲಾಖೆ ಹಾಗೂ ರೈತರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಸಖಿಯರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಸಂಶೋಧನೆಯ ಅಂತಿಮ ಫಲವು ನೇರವಾಗಿ ಕೃಷಿ ಭೂಮಿಯಲ್ಲಿ ಪ್ರತಿಫಲಿಸಬೇಕು ಎಂದರು. ಈ ತರಬೇತಿ ಶಿಬಿರದಲ್ಲಿ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕಿನ 50 ಕೃಷಿ ಸಖಿಯರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ. ಕೇದರನಾಥ ಹಾಗೂ ಡಾ. ಧರಣೇಶ ಎನ್.ಕೆ. ಉಪಸ್ಥಿತರಿದ್ದರು. ತೋಟಗಾರಿಕೆ ವಿಜ್ಞಾನಿ ಡಾ. ರಶ್ಮಿ ಆರ್. ಸ್ವಾಗತಿಸಿ, ಬೇಸಾಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಶೆಣೈ ವಂದಿಸಿದರು. ಡಾ. ಮಲ್ಲಿಕಾರ್ಜುನ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ