image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಐ ಯುಗದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ ಅಗತ್ಯ: ಸುಯೋಗ್ ಶೆಟ್ಟಿ

ಎಐ ಯುಗದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ ಅಗತ್ಯ: ಸುಯೋಗ್ ಶೆಟ್ಟಿ

ಮೂಡುಬಿದಿರೆ: ಕೃತಕ ಬುದ್ಧಿಮತ್ತೆ (ಎಐ) ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು ಉದ್ಯಮ ಮತ್ತು ನಿರ್ವಹಣಾ ಕ್ಷೇತ್ರಗಳನ್ನು ವೇಗವಾಗಿ ಪರಿವರ್ತಿಸುತ್ತಿದ್ದು, ವಿದ್ಯಾರ್ಥಿಗಳು ಈ ಬದಲಾವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ ಹಾಗೂ ಸ್ಟ್ರಾಟೆಜಿಕ್ ಅಡ್ವೈಸರ್ ಸುಯೋಗ್ ಶೆಟ್ಟಿ ಕರೆ ನೀಡಿದ್ದಾರೆ.

ಇಲ್ಲಿನ ಆಳ್ವಾಸ್ ಸ್ನಾತಕೋತ್ತರ ವ್ಯವಹಾರ ನಿರ್ವಹಣಾ ವಿಭಾಗದ 2026–28ನೇ ಸಾಲಿನ ಎಂಬಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಎಂಬಿಎ ಆಗಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನಷ್ಟೇ ವೈಫಲ್ಯಗಳಿಂದ ಕಲಿಯುವ ಸಾಮರ್ಥ್ಯವೂ ಮಹತ್ವದ್ದಾಗಿದೆ. ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸ್ಥೈರ್ಯವೇ ಯಶಸ್ಸಿಗೆ ಮುಖ್ಯ ಅಡಿಪಾಯ ಎಂದ ಅವರು, ವಿದ್ಯಾರ್ಥಿಗಳು ಮುಂದಿನ ವೃತ್ತಿಜೀವನವನ್ನು ಈಗಿನಿಂದಲೇ ಯೋಜಿಸಿ ಎಐ ತಂತ್ರಜ್ಞಾನದ ಪ್ರಭಾವಕ್ಕೆ ತಕ್ಕಂತೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ವಿದ್ಯಾರ್ಥಿನಿ ಮೇಘನಾ ವೆಂಕಟೇಶ್ ಮಾತನಾಡಿ, ಬಲವಾದ ಸಂಪರ್ಕ ಜಾಲ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಫಲಿತಾಂಶಕ್ಕಿಂತ ಪ್ರಕ್ರಿಯೆಯ ಮೇಲೆ ಗಮನಹರಿಸುವುದು ಪ್ರಮುಖ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೇವಲ ಪರೀಕ್ಷಾ ಕೇಂದ್ರಿತ ಶಿಕ್ಷಣಕ್ಕೆ ಸೀಮಿತರಾಗದೆ ಶಿಸ್ತು, ಜ್ಞಾನ ಹಾಗೂ ಸಮಾಜದೊಂದಿಗೆ ಬೆರೆಯುವ ಕಲೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡೀಸ್ ಶುಭನುಡಿಗಳನ್ನಾಡಿದರು. ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಸ್ವಾಗತಿಸಿದರು. ಡಾ. ಕ್ಯಾಥ್ರಿನ್ ಡೇವಿಡ್ ಕಾರ್ಯಕ್ರಮ ನಿರೂಪಿಸಿ, ಡಾ. ವಿಷ್ಣುಮೂರ್ತಿ ವಂದಿಸಿದರು.

Category
ಕರಾವಳಿ ತರಂಗಿಣಿ