image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ 'ರಚನಾನ್ವಯ' ಸಿಎಂಇ ಕಾರ್ಯಕ್ರಮ ಉದ್ಘಾಟನೆ

ಆಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ 'ರಚನಾನ್ವಯ' ಸಿಎಂಇ ಕಾರ್ಯಕ್ರಮ ಉದ್ಘಾಟನೆ

ಮೂಡುಬಿದಿರೆ: ಕೇಂದ್ರ ಆಯುಷ್ ಸಚಿವಾಲಯದ ಪ್ರಾಯೋಜಕತ್ವ ಹಾಗೂ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಸಮನ್ವಯದೊಂದಿಗೆ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ರಚನಾಶರೀರ ವಿಭಾಗವು ಆಯೋಜಿಸಿರುವ ಆರು ದಿನಗಳ ‘ರಚನಾನ್ವಯ’ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮ ಸೋಮವಾರ ಶುರುವಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಮಹಾಬಲ ಶೆಟ್ಟಿ, ಆಯುರ್ವೇದ ವೈದ್ಯಕೀಯ ಶಿಕ್ಷಣದಲ್ಲಿ ರಚನಾಶರೀರವು ಮೂಲಭೂತ ಅಧ್ಯಯನ ಕ್ಷೇತ್ರವಾಗಿದೆ ಎಂದರು. ಮಾನವ ದೇಹದ ರಚನೆಯ ಸಮಗ್ರ ಅರಿವು ಉತ್ತಮ ವೈದ್ಯಕೀಯ ಜ್ಞಾನಕ್ಕೆ ಭದ್ರ ಅಡಿಪಾಯ ಒದಗಿಸುತ್ತದೆ. ಪ್ರಾಚೀನ ಆಯುರ್ವೇದ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಅರಿವಿನೊಂದಿಗೆ ಸಮನ್ವಯಗೊಳಿಸುವಲ್ಲಿ ಈ ವಿಷಯದ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ತಿಳಿಸಿದರು.

ಈ ಸಿಎಂಇ ಕಾರ್ಯಕ್ರಮದಲ್ಲಿ ಬೆಳಗಾವಿಯ ಕೆಎಲ್‌ಇ ಶ್ರೀ ಬಿ.ಎಂ.ಕೆ. ಆಯುರ್ವೇದ ಮಹಾವಿದ್ಯಾಲಯದ ರಚನಾಶರೀರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಮಹಾಂತೇಶ್ ವಿ. ರಾಮಣ್ಣವರ್ ಮತ್ತು ಮಾಹಿಯ ರಾಜೀವ್ ಗಾಂಧಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಹಪ್ರಾಧ್ಯಾಪಕ ಡಾ. ವಿನೋದ್ ಕುಮಾರ್ ಆಲಪಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ್ ಶೆಟ್ಟಿ ಮಾತನಾಡಿ, ಆಯುರ್ವೇದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ರಚನಾ ಶರೀರ ವಿಷಯದ ಕುರಿತು ಆಳವಾದ ಜ್ಞಾನ ಹಾಗೂ ಶೈಕ್ಷಣಿಕ ತಿಳುವಳಿಕೆಯನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ರಚನಾ ಶರೀರ ವಿಭಾಗದ ಮುಖ್ಯಸ್ಥೆ ಡಾ. ಸ್ವಪ್ನಾ ಕುಮಾರಿ ಸ್ವಾಗತಿಸಿ, ಆಯುರ್ವೇದ ಕ್ಷೇತ್ರದಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ ಚಟುವಟಿಕೆಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯಾ ಎಸ್. ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಡಾ. ಅಜೀಮ್ ವಂದಿಸಿದರು.

Category
ಕರಾವಳಿ ತರಂಗಿಣಿ